ಮಂಗಳೂರಿನ ಮಳಲಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಂತೆ ಮಳಲಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆಯಿತು.

ಎರಡೂ ಕಡೆಯ ವಾದ ವಿವಾದಗಳನ್ನು ಆಲಿಸಿ, ವಿಚಾರಣೆಯನ್ನು ನಾಳೆಗೆ ಮೂರನೇ ಹೆಚ್ಚುವರಿ ನ್ಯಾಯಾಲಯ ಮುಂದೂಡಿದೆ.

ಮೊದಲಿಗೆ ವಾದ ಮಂಡಿಸಿದ ವಿಶ್ವ ಹಿಂದೂ ಪರಿಷತ್ ಪರ ವಕೀಲ ಚಿದಾನಂದ ಕೆದಿಲಾಯ, ವಿವಾದಿತ‌ ಜಾಗದಲ್ಲಿ ಇರುವ ಹಳೆಯ ಕಟ್ಟಡದಲ್ಲಿ ದೇವಸ್ಥಾನದಂತಹಾ ರಚನೆ ಮತ್ತು ಕೆತ್ತನೆಗಳಿವೆ ಎಂದು ವಾದ ಮಂಡಿಸಿದರು.

ಈ ವೇಳೆ ವಿಹಿಂಪ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಸೀದಿ ಪರ ವಕೀಲರು, ಇದು 700 ವರ್ಷಗಳ ಇತಿಹಾಸ ಇರುವ ಮಸೀದಿ. ಆ‌ ಸಮಯದಲ್ಲಿ ಇಂತಹಾ ವಾಸ್ತುಶಿಲ್ಪಗಳನ್ನೆ ಬಳಸಿಕೊಂಡು ಮಸೀದಿಗಳನ್ನು ಕಟ್ಟಲಾಗಿದೆ. ಇದಕ್ಕೆ ಕಾಸರಗೋಡು, ಮಂಗಳೂರಿನ ಬಂದರ್ ಮಸೀದಿ ಹಾಗೂ ಮಳಲಿ ಪೇಟೆ ಮಸೀದಿಯ ಸಮೀಪದಲ್ಲೇ ಇರುವ ಅಮ್ಮುಂಜೆ ಮಸೀದಿಗಳ ರಚನೆಯೂ ಈ ಮಸೀದಿಯ ರಚನೆಗೆ ಹೋಲಿಕೆಯಾಗುತ್ತಿವೆ‌. ವಿವಾದಿತ ಮಸೀದಿ ಇದ್ದ ಸ್ಥಳದಲ್ಲಿ ದೇವಸ್ಥಾನ ಇತ್ತೆಂದರೆ ಸಾಲದು, ಅದಕ್ಕೆ ಪೂರಕ ಸಾಕ್ಷಿಗಳನ್ನು ಒದಗಿಸಬೇಕೆಂದು ವಾದಿಸಿದರು.

ಮಸೀದಿಗೆ ಸಂಬಂಧಿಸಿದ 91 ಸೆನ್ಟ್ ಜಾಗವಿದೆ.‌ ಇದನ್ನು ಸರಕಾರಿ ಅಧಿಕಾರಿಗಳೇ ಗುರುತಿಸಿದ್ದಾರೆ. ಅಲ್ಲದೆ, ಈ ಮಸೀದಿಯಲ್ಲಿ 500 ವರ್ಷಗಳ ಹಿಂದಿನ ಮುಸ್ಲಿಮರ ಗೋರಿಗಳಿವೆ. ಇದು ಕೇವಲ ರಾಜಕೀಯ ಕಾರಣಕ್ಕಾಗಿ ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ. ಅಲ್ಲದೆ, ಮಾಧ್ಯಮಗಳು ಮಸೀದಿಯನ್ನು ದೇವಸ್ಥಾನ ಎಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿವೆ ಎಂದು ನ್ಯಾಯಾಲಯದ ಗಮನ ಸೆಳೆದರು.

ಈ ಪ್ರಕರಣ ಜ್ಞಾನವ್ಯಾಪಿ ಮಸೀದಿಯ ಪ್ರಕರಣದಂತೆ ಇದೆ. ಆದ್ದರಿಂದ‌ ನ್ಯಾಯಾಲಯ ಪ್ರತ್ಯೇಕ ಆಯೋಗವೊಂದನ್ನು ರಚಿಸಿ ಆ ಮೂಲಕ‌ ಮಸೀದಿಯ ಸಂಪೂರ್ಣ ಸರ್ವೇ ನಡೆಸಬೇಕು. ಒಟ್ಟಾರೆಯಾಗಿ ಈ ಪ್ರಕರಣ ಸತ್ಯಾಸತ್ಯತೆಗಳು ಹೊರ‌ ಬರಬೇಕಿದ್ದರೆ, ವೈಜ್ಞಾನಿಕವಾದ ಸಂಶೋಧನೆಗಳನ್ನೊಳಗೊಂಡ‌‌ ವರದಿಯ ಅಗತ್ಯವಿದೆ ಎಂದು ವಿಶ್ವ ಹಿಂದೂ ಪರಿಷತ್ ಪರ ವಕೀಲರು ವಾದದ ಸಂದರ್ಭ ರಾಮ‌ ಜನ್ಮ ಭೂಮಿ ಪ್ರಕರಣವನ್ನು ಪ್ರಸ್ತಾಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಸೀದಿಯ ಪರ ವಕೀಲರು, ರಾಮಜನ್ಮ ಭೂಮಿಗೂ ಮಳಲಿ ಮಸೀದಿಯ ವಿವಾದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.‌ ಅದು ರಾಮನ ಜನ್ಮ ಭೂಮಿ ಎಂಬ ಕಾರಣಕ್ಕೆ ಬೇಡಿಕೆ ಇಡಲಾಗಿತ್ತು. ಆದರೆ, ಇಲ್ಲಿ 1991 ಜಾರಿಗೆ ತರಲಾಗಿರುವ ಕಾನೂನಿನ ಪ್ರಕಾರ ಸ್ವಾತಂತ್ರ್ಯದ‌ ಸಂದರ್ಭ ಇದ್ದ ಧಾರ್ಮಿಕ ಸ್ಥಳಗಳಲ್ಲಿ ಯಥಾ ಸ್ಥಿತಿ ಕಾಪಾಡಬೇಕೆಂದಿದೆ‌. ಅದರಂತೆ ಮಳಲಿ‌ ಮಸೀದಿಗೂ ಈ ಕಾನೂನು ಅನ್ವಯವಾಗುತ್ತದೆ‌‌‌ ಎಂದು ವಾದಿಸಿದರು.

Leave a Reply

Your email address will not be published. Required fields are marked *

error: Content is protected !!