ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ಅವಕಾಶ ಸಿಕ್ಕಿಲ್ಲ ಅಂತ ರಾಂಗ್ ಆಗಿದ್ದ ಪುತ್ತಿಲ, ಈಗ ಅದೇ ಪಕ್ಷದ ಎದುರು ಬೆಂಡಾಗಿದ್ದಾರೆ‌. ಪುತ್ತೂರಿನಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧೆ ಮಾಡಿ, ಸಂಘ ಪರಿವಾರಕ್ಕೆ ಪರ್ಯಾಯ ಪರಿವಾರ ಮಾಡಿದ ಪುತ್ತಿಲ ಇತ್ತೀಚೆಗೆ ಮತ್ತೆ ಪಕ್ಷ ಸೇರಲು ಮಾಡಿದ ಸರ್ಕಸ್ ಅಷ್ಟಿಷ್ಟಲ್ಲ. ಪುತ್ತೂರಿನಲ್ಲಿ ನಾವೇ ವಿರೋಧ ಪಕ್ಷ ಹಾಗಾಗಿ ನಮ್ಮ ಶರತ್ತು ಈಡೇರಿಸಿ ಅಂತ ಪುತ್ತಿಲ ಪರಿವಾರ ರಾಷ್ಟ್ರೀಯ ಪಕ್ಷವನ್ನೇ ಬ್ಲ್ಯಾಕ್ ಮೇಲ್ ಮಾಡಿತ್ತು. ಮಂಡಲ ಹಾಗೂ ಗ್ರಾಮಾಂತರ ಒಂದು ಮಾಡಿ ಅರುಣ್ ಪುತ್ತಿಲಗೆ ಅಧ್ಯಕ್ಷ ಸ್ಥಾನ ನೀಡಿ ಅನ್ನೋ ಬೇಡಿಕೆ ಕೂಡಾ ಇಟ್ಟಿತ್ತು. ಸಭೆ ನಡೆಸಿದ ಪರಿವಾರ ಮೂರು ದಿನದೊಳಗೆ ಉತ್ತರ ನೀಡಿ ಇಲ್ಲಾ ನಮ್ಮ ನಡೆ ನೋಡಿ ಅಂತಾನೂ ಎಚ್ಚರಿಸಿತ್ತು. ಆದ್ರೆ ಬಿಜೆಪಿ ಹಾಗೂ ಸಂಘ ಪರಿವಾರ ಯಾವುದಕ್ಕೂ ಸೊಪ್ಪು ಹಾಕಲೇ ಇಲ್ಲ. ಆದ್ರೆ ಇದೀಗ ಯಾವ ಶರತ್ತೂ ಇಲ್ಲದೆ ಪುತ್ತಿಲ ಪರಿವಾರ ಬಿಜೆಪಿಗೆ ಮಂಡಿಯೂರಿ ಜೈ ಅಂದಿದೆ.

ಎರಡು ವಾರಗಳ ಹಿಂದೆ ಪುತ್ತಿಲ, ಪಕ್ಷೇತರರಾಗಿ ಸ್ಪರ್ಧೆ ಮಾಡೋದಾಗಿ ಪರಿವಾರದ ಮುಖಂಡರು ಹೇಳಿಕೆ ನೀಡಿದ್ದರು. ಆದ್ರೆ ಯಾವಾಗ ಪಕ್ಷದ ಅಭ್ಯರ್ಥಿ ಬದಲಾಗಿ, ನಳೀನ್ ಬದಲು ಬ್ರಿಜೇಶ್ ಚೌಟ ಬಂದ್ರೋ ಪುತ್ತಿಲ ಪರಿವಾರ ಬಾಲ ಅಡಿಗೆ ಹಾಕಿಕೊಂಡಿದೆ. ನಾನಾ ಸರ್ಕಸ್ ಮಾಡಿ ಬಿಜೆಪಿ ಸೇರಲು ಪರಿವಾರದ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ ಪುತ್ತೂರಿನ ಬಿಜೆಪಿಯ ನೈಜ್ಯ ಕಾರ್ಯಕರ್ತರು, ನಾಯಕರು ಹಾಗೂ ಮಂಡಲದ ಪ್ರಮುಖರಿಗೆ ಪುತ್ತಿಲ ಸೇರ್ಪಡೆ ಸುತಾರಂ ಇಷ್ಟವಿಲ್ಲ. ಆದ್ರೆ ಬಿಜೆಪಿ ಬೇಡ ಬೇಡಾ ಅಂದ್ರೂ , ಪುತ್ತಿಲ ಪರಿವಾರ ಬೇಕೇ ಬೇಕು ಅಂತ ಬಿಜೆಪಿಯ ಕಾಲಿಗೆ ಬಿದ್ದು ಪಕ್ಷಕ್ಕೆ ಸೇರ್ಪಡೆಯಾಗಿದೆ. ಇದು ಬಿಜೆಪಿಯಲ್ಲೂ, ಪುತ್ತಿಲ ಪರಿವಾರದಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿಂದೆ ಪುತ್ತೂರಿನಲ್ಲಿ ಬಂಡಾಯ ಎದ್ದ ಶಕುಂತಳಾ ಶೆಟ್ಟಿ ಅವರನ್ನು ಸೋಲಿಸಿದ ಬಿಜೆಪಿಗರಿಗೆ, ಅರುಣ್ ಪುತ್ತಿಲ ಸೋಲಿನ ರುಚಿ ತೋರಿಸಿದ್ದರು. ಸ್ವಾಭಿಮಾನದಿಂದ ಪಕ್ಷ ತೊರೆದು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಶಕು ಅಕ್ಕ ಮತ್ತೆಂದೂ ಬಿಜೆಪಿ ಕಡೆ ತಿರುಗಿ ನೋಡಿಲ್ಲ. ಒಂದು ವೇಳೆ ತಿರುಗಿ ನೋಡಿದ್ರೂ ಪುತ್ತೂರಿನ ಪಕ್ಕಾ ಹಿಂದುತ್ವವಾದಿ ಬಿಜೆಪಿಗರು ಸ್ವೀಕರಿಸೋದು ಇಲ್ಲ. ಅದು ಗೊತ್ತಿದ್ದೇ ಶಕು ಅಕ್ಕ ಬಿಜೆಪಿ ಸಹವಾಸ ಬಿಟ್ಟು ಕಾಂಗ್ರೆಸ್ ಸೇರಿ ಅಲ್ಲೇ ಶಾಸಕಿ ಕೂಡಾ ಆದ್ರು. ಆದ್ರೆ ಪುತ್ತಿಲ ವಿಚಾರಕ್ಕೆ ಬಂದ್ರೆ ಕಥೆ ಬೇರೆನೆ ಇರೋ ಕಾರಣ, ಪುತ್ತೂರು ಬಿಜೆಪಿ ಕಛೇರಿಗೆ ಪುತ್ತಿಲ ಪ್ರವೇಶ ಮಾಡಬಾರದು ಅಂತ ಪುತ್ತೂರು ಮಂಡಲದ ಬಿಜೆಪಿ ನಾಯಕರು ಹೇಳಿದ್ದಾರೆ. ಹಾಗೊಂದು ವೇಳೆ ಪುತ್ತಿಲ ಕಛೇರಿ ಪ್ರವೇಶ ಮಾಡಿದ್ರೆ ಕಛೇರಿಗೆ ಬೆಂಕಿ ಹಾಕೋ ಎಚ್ಚರಿಕೆಯನ್ನು ನೀಡಿದ್ದಾರೆ.

ಇಷ್ಟೆಲ್ಲಾ ವಿರೋಧ ಇದ್ರೂ ‘ಎಲ್ಲೂ ಸಲ್ಲದವನಾಗಬಾರದು ಅಂತ ಮಾನ ಮರ್ಯಾದೆ ಬಿಟ್ಟು ಪುತ್ತಿಲ ಬಿಜೆಪಿ ಸೇರಿದ್ದಾರೆ’ ಅಂತ ಬಿಜೆಪಿಗರೇ ಮಾತನಾಡುತ್ತಿದ್ದಾರೆ. ಕನಿಷ್ಟ ಪಕ್ಷ …ಪಕ್ಷ ಸೇರ್ಪಡೆಗೂ ಪುತ್ತೂರಿನಲ್ಲಿ ಅವಕಾಶ ಸಿಗದೆ, ಮಂಗಳೂರಿಗೆ ಬಂದು ಪಕ್ಷ ಸೇರ್ಪಡೆಯಾಗಿದ್ದಾರೆ ಅಂತ ಬಿಜೆಪಿಗರೇ ಲೇವಡಿ ಮಾಡುತ್ತಿದ್ದಾರೆ. ಒಟ್ಟಾರೆ ಸ್ವಾಭಿಮಾನಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ಪುತ್ತಿಲ… ಬಲವಿದ್ದರೂ ಬಲವಿಲ್ಲದ ಬಿಲ್ಲಿನಂತೆ ಬಿಜೆಪಿ ಎದುರು ನಡುಬಾಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಇದೆಲ್ಲದರ ನಡುವೆ ಶಕು ಅಕ್ಕನ ‘ಸ್ವಾಭಿಮಾನ’ ನೆನೆಪಿಸಿ ಕೆಲವರು ಪುತ್ತಿಲ ನಡೆಯ ಬಗ್ಗೆ ಟೀಕಿಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!