ಮಡಿಕೇರಿ, ಫೆ 12: ಮಾಡಿದ ತಪ್ಪಿಗೆ ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ ಎಂದು ಹೇಳಲಾಗುತ್ತದೆ. ಆದ್ರೆ ಇಲ್ಲೊಬ್ಬರು ತಪ್ಪು ಮಾಡಿಬಿಟ್ಟೆ ಅಂತ ಪಶ್ಚಾತ್ತಾಪದ ಬೇಗುದಿಯಲ್ಲಿ ಬೆಂದು ಕೊನೆಗೆ ತಾವೇ ಸಾವಿಗೆ ಶರಣಾದ ಘಟನೆ ನಡೆದಿದೆ. ಅಪಘಾತ ಪ್ರಕರಣದಲ್ಲಿ ಗಾಯಾಳು ಒಂದುಕಡೆ ಸಾವನ್ನಪ್ಪಿದರೆ, ಅಪಘಾತ ಮಾಡಿದ ವ್ಯಕ್ತಿಯೂ ಮನನೊಂದು ನೇಣಿಗೆ ಕೊರಳೊಡ್ಡಿದ ಕುರಣಾಜನಕ ಕತೆ ಇದು.

ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ ನಗರ ಸಮೀಪದ ಚೈನ್​ ಗೇಟ್​ ಬಳಿ ಕಳೆದ ಶುಕ್ರವಾರ ಸಂಜೆ ಅಪಘಾತವೊಂದು ಸಂಭವಿಸಿತ್ತು. ಸೋಮವಾರಪೇಟೆ ತಾಲ್ಲೂಕಿನ ಕಾಂಡನಕೊಲ್ಲಿ ಗ್ರಾಮದ ನಿವಾಸಿ ಗಗನ್ ಸುಬ್ಬಯ್ಯ (23), ಮಡಿಕೇರಿಯಿಂದ ತನ್ನ ಗ್ರಾಮದತ್ತ ತನ್ನ ಬೈಕ್​ ನಲ್ಲಿ ತೆರಳುತ್ತಿದ್ದ. ಅದೇ ಸಂದರ್ಭ ಉಪ ರಸ್ತೆಯಿಂದ ಮಡಿಕೇರಿ ತಾಲ್ಲೂಕಿನ ಹೆರವನಾಡು ಗ್ರಾಮದ ತಮ್ಮಯ್ಯ (57) ಎಂಬುವರು ತಮ್ಮ ಸ್ಕೂಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುತ್ತಾರೆ.

ಕ್ಷಣಮಾತ್ರದಲ್ಲಿ ತಮ್ಮಯ್ಯ ಅವರ ಸ್ಕೂಟಿ ಗಗನ್ ಓಡಿಸುತ್ತಿದ್ದ ಬೈಕ್​ಗೆ ಅಪ್ಪಳಿಸಿ ಆ ಬೈಕ್ ಕುಶಾಲನಗರ ಕಡೆಯಿಂದ ಬರುತ್ತಿದ್ದ ಲಾರಿಗೆ ಗುದ್ದಿ ಕೆಳಕ್ಕೆ ಬೀಳುತ್ತದೆ. ಕ್ಷಣ ಮಾತ್ರದಲ್ಲಿ ಎಲ್ಲವೂ ನಡೆದುಹೋಗುತ್ತದೆ. ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ಗಗನ್ ಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ರವಾನಿಸಲಾಗುತ್ತದೆ. ಇತ್ತ ಅಪಘಾತ ಮಾಡಿದ ತಮ್ಮಯ್ಯ ಪೊಲೀಸರಿಗೆ ಸ್ಟೇಟ್​ಮೆಂಟ್​ ನೀಡಿ ಮನೆಗೆ ಮರಳಿದರೂ ತೀವ್ರ ಮನನೊಂದಿದ್ದರಂತೆ. ಅಪಘಾತದ ತೀವ್ರತೆಯನ್ನ ನೋಡಿದ್ದ ಅವರು ಗಗನ್ ತೀರಾ ಗಂಭೀರ ಪರಿಸ್ಥಿತಿಯಲ್ಲಿರುವುದನ್ನ ಮನಗಂಡಿದ್ದರು. ತನ್ನಿಂದಾಗಿ ಇನ್ನೂ ಬಾಳಿ ಬದುಕಬೇಕಾಗಿದ್ದ ಯುವಕ ಈ ರೀತಿ ಆದನಲ್ಲಾ ಎಂದು ಪಶ್ಚಾತಾಪ ಪಡುತ್ತಿದ್ದರಂತೆ.

ಬಡತನದಲ್ಲಿದ್ದ ಇವರು ಕಷ್ಟಪಟ್ಟು ತಮ್ಮ ಮಗನನ್ನು ಸಿಆರ್​ಪಿಎಫ್​ ಯೋಧರನ್ನಾಗಿ ಮಾಡಿದ್ದರು. ಮಗ ಇತ್ತೀಚೆಗೆ ಹೊಸ ಮನೆ ಕಟ್ಟಿಸಲು ಶುರು ಮಾಡಿದ್ದರು. ಸ್ವತಃ ತಮ್ಮಯ್ಯ ಅವರೇ ಮನೆ ನಿರ್ಮಾಣ ನೋಡಿಕೊಳ್ಳುತ್ತಿದ್ದರು. ಈ ಮಳೆಗಾಲದ ಒಳಗೆ ಹೊಸ ಮನೆ ಸೇರುವ ಕನಸು ಕಂಡಿದ್ದರು. ಆದ್ರೆ ಆ ಒಂದು ಅಪಘಾತ ಇದೀಗ ಇವರ ಜೀವನವನ್ನೇ ಮುಗಿಸಿಬಿಟ್ಟಿದೆ ಅಂತ ತಮ್ಮಯ್ಯ ಸಹೋದರನ ಪುತ್ರ ರಘು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತ ಗಗನ್ ಮನೆಯಲ್ಲೂ ಶೋಕ ಮಡುಗಟ್ಟಿದೆ. ಮಗ ಡಿಗ್ರಿ ಮುಗಿಸಿ ಇದೀಗ ಎಂಬಿಎ ಓದುತ್ತಿದ್ದ. ಶುಕ್ರವಾರವೂ ಮಡಿಕೇರಿ ಎಫ್​ಎಂಸಿ ಕಾಲೇಜಿನಲ್ಲಿ ಕ್ಲಾಸ್ ಮುಗಿಸಿ ತನ್ನ ಬೈಕ್​ನಲ್ಲಿ ಬರುತ್ತಿದ್ದ. ಆದ್ರೆ ತನ್ನದಲ್ಲದ ತಪ್ಪಿಗೆ ಇದೀಗ ಚಿಕ್ಕ ವಯಸ್ಸಲ್ಲೇ ಜೀವ ತೆತ್ತಿದ್ದಾನೆ. ರಾಷ್ಟ್ರೀಯ ಹೆದ್ದಾರಿಯ ಚೈನ್ ಗೇಟ್ ಜಂಕ್ಷನ್​ನಲ್ಲಿ ರಸ್ತೆಗೆ ಅಂಟಿಕೊಂಡೇ ಅವೈಜ್ಞಾನಿಕವಾಗಿ ಬಸ್​ ನಿಲ್ದಾಣ ನಿರ್ಮಾಣ ಮಾಡಿರುವುದರಿಂದಲೇ ಈ ಅಪಘಾತ ಸಂಭವಿಸಿದೆ. ಈ ಬಸ್​ ನಿಲ್ದಾಣದಿಂದಾಗಿಯೇ ಇಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಹಾಗಾಗಿ ಈ ಬಸ್​ ನಿಲ್ದಾಣವನ್ನ ಮೊದಲು ತೆರವು ಮಾಡಿ ಅಂತ ಗಗನ್ ಪೋಷಕರು ಮನವಿ ಮಾಡಿದ್ದಾರೆ. ಅಲ್ಲದೆ ತನ್ನ ಮಗನಂತೂ ಹೋದ ಆದ್ರೆ ತಮ್ಮಯ್ಯ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಅಂತ ಗಗನ್ ತಂದೆ ಜಯ ಗಣಪತಿ ವಿಷಾದ ವ್ಯಕ್ತಪಡಿಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!