ಮಂಗಳೂರು: ಕಾಸರಗೋಡು ಜಿಲ್ಲೆಯ ಬದಿಯಡ್ಕದ ದಂತ ವೈದ್ಯ ಡಾ.ಕೃಷ್ಣಮೂರ್ತಿ ನಿಗೂಢವಾಗಿ ಮೃತಪಟ್ಟ ಪ್ರಕರಣದಲ್ಲಿ ಬದಿಯಡ್ಕ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ನ.8ರಂದು ಬದಿಯಡ್ಕದಿಂದ ಕಾಣೆಯಾಗಿದ್ದ ಕೃಷ್ಣಮೂರ್ತಿ ಮೃತದೇಹ ಕಾಸರಗೋಡಿನ ರೈಲ್ವೆ ಹಳಿ ಬಳಿ ಪತ್ತೆಯಾಗಿತ್ತು. ಸದ್ಯ ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತ್ ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತ್ ಪದಾಧಿಕಾರಿ ಮುಹಮ್ಮದ್ ಹನೀಫ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್,ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಬಂಧಿತರು.

ಅಲಿ ಹಾಗೂ ಅನ್ವರ್ ಸೇರಿಕೊಂಡು ಡಾ.ಕೃಷ್ಣಮೂರ್ತಿ ಅವರಿಗೆ ಅವರ ಕ್ಲಿನಿಕ್ ನಲ್ಲಿ ಕೊಲೆ ಬೆದರಿಕೆ ಹಾಕಿದ್ದರು. ಆ ಬಳಿಕ ಡಾ.ಕೃಷ್ಣಮೂರ್ತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಆರೋಪಿಗಳು ಮಹಿಳೆಯ ಮೂಲಕ ಬೆದರಿಸಿ ಡಾಕ್ಟರ್ ಕೈಯಿಂದ ಲಕ್ಷಗಟ್ಟಲೆ ಹಣ ಪಡೆಯಲು ಯೋಜನೆ ಹಾಕಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ನವೆಂಬರ್ 8ರಂದು ಕಾಣೆಯಾಗಿದ್ದ ಕೃಷ್ಣಮೂರ್ತಿ 9ರಂದು ಬದಿಯಡ್ಕದಿಂದ 180 ಕಿ.ಮೀ ದೂರದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ‌ ಬಳಿಯ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ನವೆಂಬರ್ 10ರಂದು ಕೃಷ್ಣಮೂರ್ತಿ ಕುಟುಂಬಸ್ಥರು ಮೃತದೇಹದ ಗುರುತು ಪತ್ತೆ ಮಾಡಿದ್ದರು. ಮೇಲ್ನೋಟಕ್ಕೆ ಆತ್ಮಹತ್ಯೆ ಅಂತ ಕಂಡುಬಂದರೂ ಅವರ ಸಾವಿನ ಸುತ್ತ ಅನುಮಾನ ಹುಟ್ಟಿಕೊಂಡಿತ್ತು.

ಡಾ.ಕೃಷ್ಣಮೂರ್ತಿ ಕುಟುಂಬಸ್ಥರು ಹೇಳುವ ಪ್ರಕಾರ ಜಾಗದ ವಿಚಾರದಲ್ಲಿ ಕೆಲ ತಗಾದೆ ಇತ್ತು ಎನ್ನಲಾಗಿದೆ. ಆರು ತಿಂಗಳಿನಿಂದ ಜಾಗದ ವಿಚಾರದ ಕುರಿತು ‌ಕೃಷ್ಣಮೂರ್ತಿ‌ ಅವರಿಗೆ ನಿರಂತರ ಕಿರುಕುಳ, ಬೆದರಿಕೆ ಅನುಭವಿಸಿದ್ದರು ಎನ್ನಲಾಗಿದೆ. ಅವರ ಜಾಗವನ್ನು ತಮಗೇ ಮಾರಾಟ ಮಾಡುವಂತೆ ಕೆಲವರು ಕಿರುಕುಳ ನೀಡುತ್ತಿದ್ದ ಬಗ್ಗೆ ದೂರಲಾಗಿತ್ತು. ಇದೇ ವಿಚಾರದಿಂದ ನೊಂದು ಕೃಷ್ಣಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಅನುಮಾನ ಹುಟ್ಟಿಕೊಂಡಿದೆ.

ಬದಿಯಡ್ಕದ ಖ್ಯಾತ ದಂತ ವೈದ್ಯ ಡಾ.ಕೃಷ್ಣಮೂರ್ತಿ ಕ್ಲಿನಿಕ್ ಗೆ ತಪಾಸಣೆಗೆಂದು ಬಂದಿದ್ದ ಮಸ್ಲಿಂ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ತಂಡವೊಂದು ಹಲ್ಲೆಗೆ ಮುಂದಾಗಿ ಬೆದರಿಕೆ ಒಡ್ಡಿತ್ತು ಎನ್ನಲಾಗಿದೆ. ‌ಇದಾದ ‌ಬಳಿಕ ಅವರು ಬೈಕ್ ನಲ್ಲಿ ತೆರಳಿದ್ದು, ಮೊಬೈಲ್ ಕ್ಲಿನಿಕ್ ನಲ್ಲೇ ಬಿಟ್ಟಿದ್ದರು. ಬೈಕ್ ಬದಿಯಡ್ಕ ಪೇಟೆಯಲ್ಲಿ ಬಿಟ್ಟು ಬಳಿಕ ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು. ಇದಾದ ಬಳಿಕ ಮನೆಯವರು ಬೆದರಿಕೆ ಹಾಕಿದವರ ವಿರುದ್ದ ಬದಿಯಡ್ಕ ಠಾಣೆಗೆ ‌ದೂರು ನೀಡಿದ್ದು, ಮುಸ್ಲಿಂ ಯುವತಿ ‌ಕಡೆಯವರೂ ಪ್ರತಿದೂರು ನೀಡಿದ್ದಾರೆ. ಈ ಮಧ್ಯೆ ನಿನ್ನೆ ಅವರ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ರೈಲು ಹಳಿಗಳ ಮೇಲೆ ಕೃಷ್ಣ ಮೂರ್ತಿ ದೇಹ ಎರಡು ತುಂಡಾಗಿ ಬಿದ್ದಿದ್ದು ಇದೀಗ ಕೃಷ್ಣಮೂರ್ತಿ ಸಾವಿನ ಸುತ್ತ ಹಲವು ಅನುಮಾನ ಹುಟ್ಟಿಕೊಂಡಿದೆ. ಸದ್ಯ ಪೊಲೀಸರು ಐವರನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!