ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಅದೇ ಕಾಲೇಜಿನ ವಿದ್ಯಾರ್ಥಿ ಮಾತನಾಡುತ್ತಿದ್ದಾರೆಂಬ ಕಾರಣಕ್ಕೆ ತಂಡವೊಂದು ವಿದ್ಯಾರ್ಥಿಗೆ ಗಂಭೀರ ಹಲ್ಲೆ ನಡೆಸಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೀಕ್ಷಿತ್, ಧನುಷ್, ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್, ಗೌತಮ್ ಹಾಗೂ ಇತರರ ವಿರುದ್ಧ 143,147,148, 323, 324, 506, ಜೊತೆಗೆ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಕೊಡಿಯಾಲಬೈಲು ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಮಹಮ್ಮದ್ ಸನೀಫ್ ಎಂದು ತಿಳಿದುಬಂದಿದೆ.

ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ನನ್ನ ಸ್ನೇಹಿತೆಯಾಗಿದ್ದು, ಆಕೆಯೊಂದಿಗೆ ಮಾತನಾಡುವುದು ಕೆಲವರಿಗೆ ಇಷ್ಟವಿಲ್ಲದ ಕಾರಣ ಆ. 30ರಂದು ಬೆಳಗ್ಗೆ 10:30ಕ್ಕೆ ನಾನು ಕ್ಲಾಸ್ ರೂಂ ನಲ್ಲಿರುವಾಗ ನಮ್ಮ ಕಾಲೇಜಿನಲ್ಲಿ ಓದುತ್ತಿದ್ದ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿಗಳಾದ ದೀಕ್ಷಿತ್ ಮತ್ತು ಧನುಷ್ ಎಂಬವರು ಕ್ಲಾಸ್ ರೂಮ್ ನಿಂದ ನನ್ನನ್ನು ಕರೆದು ಮಾತನಾಡಲು ಇದೆ ಎಂದು ಹೇಳಿ ಕಾಲೇಜಿನ ಗ್ರೌಂಡ್ ಗೆ ಕರೆದುಕೊಂಡು ಹೋಗಿ ಅಲ್ಲೇ ಇದ್ದ ನಮ್ಮ ಕಾಲೇಜಿನ ಇತರ ವಿದ್ಯಾರ್ಥಿಗಳಾದ ಪ್ರಜ್ವಲ್, (ಅಂತಿಮ ವರ್ಷದ ಬಿಬಿಎ) ತನುಜ್ (ಅಂತಿಮ ವರ್ಷದ ಬಿಕಾಂ) ಅಕ್ಷಯ್ (ದ್ವಿತೀಯ ವರ್ಷದ ಬಿಕಾಂ) ಮೋಕ್ಷಿತ್ (ಅಂತಿಮ ವರ್ಷದ ಬಿಕಾಂ) ಹಾಗೂ ಸುಳ್ಯದ ಎನ್ ಎಂಸಿ ಕಾಲೇಜಿನ ಗೌತಮ್ ಮತ್ತು ಇತರರು ಕಾಲರ್ ಪಟ್ಟಿ ಹಿಡಿದು “ನೀನು ಆ ಹುಡುಗಿ ಜತೆಗೆ ಯಾಕೆ ಮಾತನಾಡುತ್ತಿಯಾ ಎಂದು ಹೇಳುತ್ತಾ, ಅವರ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಬೆನ್ನಿಗೆ ಹೊಡೆದು ನೆಲಕ್ಕೆ ದೂಡಿಹಾಕಿ ಕಾಲಿನಿಂದ ತುಳಿದು ಇನ್ನೂ ಮುಂದಕ್ಕೆ ಮಾತನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಹೇಳಿದ್ದಾರೆ. ನಂತರ ಮನೆಯವರಿಗೆ ವಿಷಯ ತಿಳಿಸಿ, ಗಂಭೀರ ಗಾಯಗೊಂಡ ಪರಿಣಾಮ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದೇನೆ ಹಾಗೂ ನನ್ನ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿರುವುದಾಗಿ ಮಹಮ್ಮದ್‌ ಸನೀಫ್‌ ತಿಳಿಸಿದ್ದಾರೆ.

ಸನೀಫ್ ನೀಡಿದ ದೂರಿನಂತೆ ಪೋಲೀಸರು ದೀಕ್ಷಿತ್, ಧನುಷ್ , ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್, ಗೌತಮ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಎನ್.ಎಂ.ಸಿ. ವಿದ್ಯಾರ್ಥಿಯಾಗಿದ್ದು ಉಳಿದವರು ಸುಳ್ಯ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳೆಂದು ಪೊಲೀಸರು ತಿಳಿಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!