ಬೆಂಗಳೂರು: ಯುಪಿಐ ಆಧರಿತ ಪೇಮೆಂಟ್ (United Payments Interface – UPI) ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ’ ಎಂದು ಕೇಂದ್ರ ಹಣಕಾಸು ಇಲಾಖೆಯು (Union Finance Ministry) ಸ್ಪಷ್ಟಪಡಿಸಿದೆ. ಈ ಮೂಲಕ ದೊಡ್ಡಮಟ್ಟದಲ್ಲಿ ವಿವಾದವಾಗಿ ಬೆಳೆಯಬಹುದಾಗಿದ್ದ ವಿಚಾರವನ್ನು ಆರಂಭದಲ್ಲಿಯೇ ತಣ್ಣಗಾಗಿಸಿದೆ. ‘ಡಿಜಿಟಲ್ ಸೇವೆಗಳನ್ನು (Digital Transaction) ಒದದಿಸುವ ಸೇವಾದಾತರಿಗೆ ತುಸು ಖರ್ಚು ಬರುವುದು ನಿಜ. ಈ ಖರ್ಚು ಭರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ. ಒಟ್ಟಾರೆಯಾಗಿ ಡಿಜಿಟಲ್ ವಹಿವಾಟು ಹೆಚ್ಚಾಗುವುದು ಸಮಾಜ ಹಾಗೂ ಉತ್ಪಾದಕತೆಗೆ ಹಲವು ರೀತಿಯಲ್ಲಿ ಅನುಕೂಲವಾಗಿದೆ. ಡಿಜಿಟಲ್ ಪಾವತಿಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರವು ಕಳೆದ ವರ್ಷ ಹಲವು ನೆರವು ನೀಡಿತ್ತು. ಆ ನೆರವನ್ನು ಈ ವರ್ಷವೂ ಮುಂದುವರಿಸಲಿದೆ’ ಎಂದು ಹಣಕಾಸು ಇಲಾಖೆ ಹೇಳಿದೆ.
ಡಿಜಿಟಲ್ ವಹಿವಾಟಿನ ಪ್ರಮಾಣ ಹೆಚ್ಚಾಗುತ್ತಿರುವಂತೆಯೇ ಯುಪಿಐ ಸೇರಿದಂತೆ ವಿವಿಧ ರೀತಿಯ ಪಾವತಿ ಮತ್ತು ಸ್ವೀಕೃತಿಗಳಿಗೆ (Payments and Receipts) ಶುಲ್ಕ ವಿಧಿಸುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಕರಡು ಪ್ರಸ್ತಾವವೊಂದನ್ನು ಜನರ ಮುಂದಿಟ್ಟು ಪ್ರತಿಕ್ರಿಯೆ ಆಹ್ವಾನಿಸಿತ್ತು. ‘ಪ್ರತಿ ವಹಿವಾಟಿಗೂ ಡಿಜಿಟಲ್ ಸೇವಾದಾತರಿಗೆ ಒಂದಿಷ್ಟು ಖರ್ಚು ಬರುತ್ತದೆ. ಅದನ್ನು ಬಳಕೆದಾರರೇ ತುಂಬಬೇಕು’ ಎನ್ನುವುದು ರಿಸರ್ವ್ ಬ್ಯಾಂಕ್ ವಾದವಾಗಿತ್ತು. ಈ ಪ್ರಸ್ತಾವಕ್ಕೆ ಜನರಿಂದ ವಿರೋಧ ವ್ಯಕ್ತವಾಗಿತ್ತು. ‘ಡಿಜಿಟಲ್ ಆರ್ಥಿಕತೆಯಿಂದ ಹಲವು ಅನುಕೂಲ ಎಂದು ಮೂಗಿಗೆ ತುಪ್ಪ ಸವರಿದಿರಿ. ಈಗ ನೋಡಿದರೆ ನಮ್ಮ ಜೇಬಿನ ದುಡ್ಡಿನಲ್ಲಿಯೂ ಪಾಲು ಕೇಳುತ್ತಿದ್ದೀರಿ. ನಾವು ನಗದು ಚಲಾವಣೆ ಮಾಡಿಕೊಂಡೇ ನೆಮ್ಮದಿಯಾಗಿರುತ್ತೇವೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಡಿಬಿಟ್ ಕಾರ್ಡ್ ಆಧರಿತ ನಗದು ವರ್ಗಾವಣೆ ಮತ್ತು ಯುಪಿಐ ಆಧರಿತ ಹಣಕಾಸಿನ ವಹಿವಾಟಿಗೆ ಆಗುತ್ತಿರುವ ವೆಚ್ಚವನ್ನು ಭರ್ತಿ ಮಾಡಿಕೊಳ್ಳುವ ದೃಷ್ಟಿಯಿಂದ ಅಲ್ಪ ಪ್ರಮಾಣದ ಶುಲ್ಕ ವಿಧಿಸುವ ಸಾಧ್ಯತೆಯನ್ನು ಪರಿಶೀಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿತ್ತು. ಪ್ರತಿ ವಹಿವಾಟಿಗೆ ಇಂತಿಷ್ಟು ಮೊತ್ತ ಎಂದು ನಿಗದಿಪಡಿಸುವ ಸಾಧ್ಯತೆಯನ್ನೂ ಪರಿಶೀಲಿಸಲು ಆರ್ಬಿಐ ಚಿಂತನೆ ನಡೆಸಿತ್ತು. ‘ಪಾವತಿ ವ್ಯವಸ್ಥೆಗೆ ಶುಲ್ಕಗಳು’ ಹೆಸರಿನ ಕರಡು ಪ್ರಸ್ತಾವ ಪ್ರಕಟಿಸಿದ್ದ ಆರ್ಬಿಐ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಒಂದು ವೇಳೆ ಆರ್ಬಿಐನ ಈ ಚಿಂತನೆ ಕಾರ್ಯರೂಪಕ್ಕೆ ಬಂದಿದ್ದರೆ ಫೋನ್ ಪೆ, ಗೂಗಲ್ ಪೆ, ಭೀಮ್ ಸೇರಿದಂತೆ ಆ್ಯಪ್ಗಳ ಮೂಲಕ ನಡೆಯುವ ಯುಪಿಐ ಆಧರಿತ ಪೇಮೆಂಟ್ ವ್ಯವಸ್ಥೆಗೆ ಶುಲ್ಕ ವಿಧಿಸಲಾಗುತ್ತಿತ್ತು.

By admin

Leave a Reply

Your email address will not be published. Required fields are marked *

error: Content is protected !!