ಮಂಗಳೂರು: ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಯ ಇಡೀ ಪ್ರಕರಣವನ್ನು ಭೇಧಿಸುವಲ್ಲಿ ಶ್ರಮಿಸಿದ ಮಂಗಳೂರು ಪೊಲೀಸ್ ಕಮಿಷನರೇಟ್‌ನಲ್ಲಿ ಕಾನೂನು, ಸುವ್ಯವಸ್ಥೆ ವಿಭಾಗದ ಡಿಸಿಪಿ ಆಗಿದ್ದು, ಈಗ ಹಾಸನ ಎಸ್‌ಪಿ ಆಗಿರುವ ಹರಿರಾಂ ಶಂಕರ್ ಅವರಿಗೆ ರಾಜ್ಯ ಎಡಿಜಿಪಿ ಅಲೋಕ್ ಕುಮಾರ್ ಅವರು ಪ್ರಶಂಸಾ ಪತ್ರ ನೀಡಿದ್ದಾರೆ.

ಜುಲೈ 26ರಂದು ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಹಂತಕರ ಪತ್ತೆ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಅಲ್ಲದೆ ಬಿಜೆಪಿ ಪದಾಧಿಕಾರಿಯಾಗಿದ್ದ ಪ್ರವೀಣ್‌ನ ಹತ್ಯೆ ಪಕ್ಷ ಹಾಗೂ ರಾಜ್ಯ ಸರ್ಕಾರ ವಿರುದ್ಧ ವಿಪಕ್ಷಗಳು ಆರೋಪ ಮಾಡುವಂತೆ ಮಾಡಿತ್ತು.

ಹೀಗಾಗಿ ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಂತೆ ಸ್ವತಃ ಸಿಎಂ ಅವರೇ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರು.

15 ದಿನಗಳ ನಿರಂತರ ಕಾರ್ಯಾಚರಣೆ ಬಳಿಕ 7 ಮಂದಿ ಸಂಚುಕೋರರು ಹಾಗೂ 3 ಮಂದಿ ಪ್ರಮುಖ ಆರೋಪಿಗಳನ್ನು ಪೊಲೀಸರ ಆರು ತಂಡಗಳು ಬಂಧಿಸುವಲ್ಲಿ ಸಫಲವಾಗಿದ್ದವು.

ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಸಲುವಾಗಿ ಡಿಸಿಪಿ ಹರಿರಾಂ ಶಂಕರ್ ಅವರನ್ನು ಹಾಸನದಿಂದ ಕರೆಸಿ ಕಾರ್ಯಾಚರಣೆ ತಂಡದ ನೇತೃತ್ವ ವಹಿಸಲಾಗಿತ್ತು.

ಹಂತಕರ ಪತ್ತೆ ಕಾರ್ಯ ಜತೆಗೆ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಸ್ಥಾಪನೆಗೆ ಇವರ ತಂಡ ಸಾಥ್ ನೀಡಿತ್ತು. ದ.ಕ ಎಸ್‌ಪಿ ಋಷಿಕೇಶ್ ಸೋನಾವಣೆ ತನಿಖಾ ಮಾರ್ಗದರ್ಶನ ಮಾಡಿದ್ದರು.

ಮಂಗಳೂರಿನಲ್ಲಿ ಡಿಸಿಪಿಯಾಗಿದ್ದಾಗ ಹರಿರಾಂ ಶಂಕರ್ ಅವರು ಶಾಂತಿ ಕದಡುವವರಿಗೆ, ಮಟ್ಕಾ, ಜೂಜುಕೋರರಿಗೆ ಸಿಂಹಸ್ವಪ್ನವಾಗಿದ್ದರು.

By admin

Leave a Reply

Your email address will not be published. Required fields are marked *

error: Content is protected !!