ಮಂಗಳೂರು: ಅಯೋಧ್ಯೆಯ ರಾಮ ಮಂದಿರದ ಕನಸು ನನಸಾಗಿದೆ. ಆದರೆ, ಜವಾಬ್ದಾರಿ ಮುಗಿದಿಲ್ಲ. ರಾಮ ಮಂದಿರ ಮಂದಿರವಾಗಿಯೇ ಉಳಿಯಬೇಕಾದರೆ ಹಿಂದುಗಳು ಈ ದೇಶದಲ್ಲಿ ಬಹುಸಂಖ್ಯಾತರಾಗಿಯೇ ಉಳಿಯಬೇಕು. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ವಿಶ್ವ ಹಿಂದು ಪರಿಷತ್ ಮಂಗಳೂರು ವತಿಯಿಂದ ನಗರದ ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ಸೋಮವಾರ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ರಾಮ ಮಂದಿರವನ್ನು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರಿಗೂ ಇದೆ. ಮಂದಿರ ಮತ್ತೊಮ್ಮೆ ವಿದೇಶಿಯರ, ವಿಧ್ವಂಸಕರ ಕೈಗೆ ಸಿಲುಕದಂತೆ ನೋಡಿಕೊಳ್ಳಬೇಕಿದೆ. ಯುಗ ಯುಗಗಳೇ ಸಂದರೂ ರಾಮನ ಬಗೆಗಿನ ನಂಬಿಕೆ ಜನಮಾನಸದಲ್ಲಿ ದೃಢವಾಗಿ ಉಳಿಯಲು ಈ ದೇಶದ ಸಂಸ್ಕೃತಿ ಕಾರಣ. ನಮ್ಮ ಮಕ್ಕಳಿಗೆ ಈ ಸಂಸ್ಕೃತಿಯನ್ನು ತಿಳಿಸಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿಗೆ ಪೂರಕವಾದ ಹೆಸರನ್ನು ಇರಿಸಬೇಕು. ಮನೆ ಮಕ್ಕಳು ಮನೆ, ಮತ, ದೇಶ ಬಿಟ್ಟು ಹೋಗುವಂತಾಗಬಾರದು. ರಾಮ ಮಂದಿರ ರಾಮರಾಜ್ಯಕ್ಕೆ ನಾಂದಿಯಾಗಬೇಕು ಎಂದು ಸ್ವಾಮೀಜಿ ಆಶಿಸಿದರು.
ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ಸಾಧನೆಯಂತೆ ಅವರ ಶಿಷ್ಯರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮುನ್ನಡೆಯುತ್ತಿದ್ದಾರೆ. ನಾಲ್ಕು ವೇದಗಳ ಪಾರಂಗತರಾದ ಅವರು, ಮಾತಿಗಿಂತ ಕೃತಿಯಲ್ಲಿ ಹೆಚ್ಚು ಭರವಸೆ ಉಳ್ಳವರು ಎಂದರು.
ಅಭಿನಂದನಾ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ರಾಷ್ಟ್ರದ, ಹಿಂದುಗಳ ಕೆಲಸವನ್ನು ದೇವರ ಕೆಲಸ ಎಂದು ನಿರ್ವಹಿಸಿದವರು. ಅವರ ಹಾದಿಯಲ್ಲಿಯೇ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸಮಾಜಕ್ಕೆ, ಸಂಘಟನೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ದೇಶದ, ಧರ್ಮದ ಕುರಿತು ಗಟ್ಟಿ ನಿಲುವು ಹೊಂದಿದ್ದಾರೆ. ಜಗತ್ತು ಶಾಂತಿಯಿಂದ ಇರಬೇಕಾದ ಭಾರತ ಶಕ್ತಿಶಾಲಿಯಾಗಬೇಕು. ಭಾರತ ಶಕ್ತಿಶಾಲಿಯಾಗುವ ಮೊದಲ ಹಂತ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಎಂದರು.
ಕದ್ರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್, ಶ್ರೀ ಕ್ಷೇತ್ರ ಕದ್ರಿಯ ವೇದಮೂರ್ತಿ ವಿಠಲದಾಸ ತಂತ್ರಿ ಮುಖ್ಯ ಅತಿಥಿಗಳಾಗಿದ್ದರು.
ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಸ್ವಾಗತ ಸಮಿತಿ ಸದಸ್ಯ ಕರುಣಾಕರ್, ಗಿರಿಪ್ರಕಾಶ್ ತಂತ್ರಿ, ಶಿವಾನಂದ ಮೆಂಡನ್, ವಿಹಿಂಪ ಪ್ರಮುಖರು ಉಪಸ್ಥಿತರಿದ್ದರು. ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ ಪುರುಷೋತ್ತಮ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.

By admin

Leave a Reply

Your email address will not be published. Required fields are marked *

error: Content is protected !!