ಮಂಗಳೂರು : ಮಂಗಳೂರು ನಗರ  ಸಿಸಿಬಿ ಪೊಲೀಸರು ಮಿಂಚಿನ ದಾಳಿ ನಡೆಸಿ ಮಾದಕ ವಸ್ತು ಎಂಡಿಎಂಎ ಹೊಂದಿದ್ದ ಕುಖ್ಯಾತ ಮೂವರು ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ರಿವಾಲ್ವರನ್ನು ವಶಕ್ಕೆ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಕೃಷ್ಣಾಪುರದಲ್ಲಿ ವಾಸವಾಗಿದ್ದ ಮೂಲತಃ ಬಂಟ್ವಾಳ ಫರಂಗಿಪೇಟೆ ಪುದು ಗ್ರಾಮ ಪಂಚಾಯತ್‌ ನಿವಾಸಿ ಮೊಹಮ್ಮದ್ ನಿಯಾಝ್‌(28), ತಲಪಾಡಿ ಕೆ ಸಿ ರೋಡ್ ನಿವಾಸಿ ಕಟ್ಟುಂಗೆರೆ ಗುಡ್ಡೆ ಹೌಸ್‌ನ ನಿಶಾದ್‌(31) ಮತ್ತು ಪಡೀಲ್‌ ಕಣ್ಣೂರು ಗಾಣದಬೆಟ್ಟು ಮನೆಯ ಮೊಹಮ್ಮದ್‌ ರಝೀನ್‌(24) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಒಟ್ಟು 180 ಗ್ರಾಂ ತೂಕದ 9 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತು, 2 ಮಾರುತಿ ಸ್ವಿಫ್ಟ್ ಕಾರು, 1,40,000 ರೂಪಾಯಿ ಮೌಲ್ಯದ 4 ಮೊಬೈಲ್‌ ಫೋನ್‌ಗಳು, 22,050 ನಗದು ಹಣ, 1 ಪಿಸ್ತೂಲ್‌, 1 ಸಜೀವ ಗುಂಡು, 2 ಡ್ರ್ಯಾಗನ್‌ ಚೂರಿಗಳು, ಡಿಜಿಟಲ್‌ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್‌  ಕುಲದೀಪ್ ಕುಮಾರ್ ಜೈನ್  ಸುದ್ದಿಗೋಷ್ಠಿಯಲ್ಲಿ  ಸಮಗ್ರ ಮಾಹಿತಿ ನೀಡಿದ್ದಾರೆ. 

ಇವೆಲ್ಲದರ ಒಟ್ಟು ಬೆಲೆ 27,62,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪೈಕಿ ಮೊಹಮ್ಮದ್ ನಿಯಾಝ್‌ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ನಗರದ ಉರ್ವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಎಎಸ್‌ಐ ಅವರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಹಲ್ಲೆ ನಡೆಸಿದ ಪ್ರಕರಣ, ಸುರತ್ಕಲ್‌ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಸೆನ್‌ ಕ್ರೈ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧ ಪಟ್ಟ 2 ಪ್ರಕರಣ, ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಎರಡು ದರೋಡೆ ಪ್ರಕರಣ ದಾಖಲಾಗಿದೆ.

ಅಲ್ಲದೆ ಕಂಕನಾಡಿ ನಗರ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಯ 2 ಪ್ರಕರಣ ಹೀಗೆ ಒಟ್ಟು 10 ಪ್ರಕರಣ ದಾಖಲಾಗಿದೆ.

ಈತ ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ವಾರಂಟ್ ಜಾರಿಯಾಗಿದೆ.

ಇನ್ನೊಬ್ಬ ಆರೋಪಿ ಮೊಹಮ್ಮದ್‌ ರಝೀನ್‌ ಎಂಬಾತನ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟ ಪ್ರಕರಣ ದಾಖಲಾಗಿದೆ.

ಆರೋಪಿಗಳು ಮುಂಬೈ, ಗೋವಾ, ಬೆಂಗಳೂರಿನಿಂದ ಡ್ರಗ್‌ ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು.

ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಿದ್ದೇವೆ ಎಂದರು. ಇದೇ ವೇಳೆ ಪೊಲೀಸ್ ಕಮಿಷನರ್ ಕುಲದೀಪ್, ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ ನಗದು ಬಹುಮಾನ ನೀಡಿ ಪುರಸ್ಕರಿಸಿದ್ದಾರೆ

By admin

Leave a Reply

Your email address will not be published. Required fields are marked *

error: Content is protected !!