ಮಂಗಳೂರು: ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಈ ಬಾರಿ ಕೊಳೆತು ನಾರುವ ಮೊಟ್ಟೆಗಳನ್ನು ನೀಡಲಾಗಿದೆ. ಮಂಗಳೂರು ನಗರದ ಬೋಂದೆಲ್, ಮರಕಡ, ಕಾವೂರು ಸೇರಿದಂತೆ ಹಲವು ಕಡೆಗಳಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗಿರುವ ಮೊಟ್ಟೆಗಳು ಕೊಳೆತು ಹೋಗಿದ್ದು, ಅಂಗನವಾಡಿ ಕಾರ್ಯಕರ್ತರಿಗೆ ಪೋಷಕರ ಆಕ್ರೋಶದ ಬಿಸಿ ತಟ್ಟಿದೆ.

ಶಿಕ್ಷಕಿಯರ ಮಾಹಿತಿ ಪ್ರಕಾರ, ಮೊನ್ನೆ ಜುಲೈ 10-11ರಂದು ಮಂಗಳೂರಿನಲ್ಲಿ ಮೊಟ್ಟೆಗಳನ್ನು ಪೂರೈಕೆ ಮಾಡಲಾಗಿತ್ತು. ವಿಜಯಪುರ ಮೂಲದ ಗುತ್ತಿ ಬಸವೇಶ್ವರ ಮ್ಯಾನ್ ಪವರ್ ಏಜನ್ಸೀಸ್, ತಾಳಿಕೋಟೆ ಹೆಸರಿನ ಸಂಸ್ಥೆಯವರು ಮೊಟ್ಟೆಗಳನ್ನು ಪೂರೈಕೆ ಮಾಡಿದ್ದರು. ಆದರೆ ಮೊಟ್ಟೆಗಳನ್ನು ಬೇಯಿಸಿದಾಗ, ಪೂರ್ತಿಯಾಗಿ ಒಳಗಡೆ ಕಪ್ಪಾಗಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ಅಂಗನವಾಡಿಗಳಿಂದ ಮೊಟ್ಟೆ ಒಯ್ದಿದ್ದ ಗರ್ಭಿಣಿ, ಬಾಣಂತಿಯರ ಮನೆಯವರು ಬಂದು ಶಿಕ್ಷಕಿ ಮತ್ತು ಕಾರ್ಯಕರ್ತೆಯರಿಗೆ ಉಚಿತ ಬೈಗುಳ ನೀಡಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ನೀಡಿದ ಬಳಿಕ ಮೊಟ್ಟೆ ಪೂರೈಕೆ ಆಗಿರಲಿಲ್ಲ. ಜೂನ್ ತಿಂಗಳ ಮೊಟ್ಟೆಯನ್ನು ಈಗ ಜುಲೈ 11ರಂದು ನೀಡಿದ್ದಾರೆ. ತಿಂಗಳ ಹಿಂದೆ ದಾಸ್ತಾನು ಇಟ್ಟಿದ್ದ ಮೊಟ್ಟೆಯನ್ನು ಈಗ ನೀಡಿದ್ದರಿಂದ ಈ ರೀತಿ ಆಗಿರಬಹುದು. ಒಂದೊಂದು ಅಂಗನವಾಡಿಗೆ ಸಾಧಾರಣ 400-500ರಷ್ಟು ಮೊಟ್ಟೆ ಪೂರೈಕೆ ಆಗುತ್ತದೆ. ಒಂದೆರಡು ಬಿಟ್ಟರೆ ಉಳಿದಂತೆ ಪೂರ್ತಿಯಾಗಿ ಮೊಟ್ಟೆಗಳು ಹಾಳಾಗಿವೆ. ಪೋಷಕರು ಬಂದು ನಮ್ಮನ್ನು ಬೈಯುತ್ತಿದ್ದಾರೆ. ಈ ಬಗ್ಗೆ ಇಲಾಖೆಗೆ ತಿಳಿಸಿದ್ದರೂ, ಯಾವುದೇ ಕ್ರಮ ಆಗಿಲ್ಲ. ಬದಲಿ ಮೊಟ್ಟೆಗಳನ್ನು ನೀಡುವ ಯತ್ನವೂ ಆಗಿಲ್ಲ ಅಂತಾರೆ, ಅಂಗನವಾಡಿ ಶಿಕ್ಷಕಿರು.

ಪ್ರತಿ ಅಂಗನವಾಡಿ ವ್ಯಾಪ್ತಿಯಲ್ಲೂ ಬಾಣಂತಿಯರು, ಗರ್ಭಿಣಿಯರಿಗೆ ಮೊಟ್ಟೆಗಳನ್ನು ಉಚಿತವಾಗಿ ಪೂರೈಕೆ ಮಾಡಲಾಗುತ್ತದೆ. ತಿಂಗಳ ಆರಂಭದಲ್ಲಿ ಮೊಟ್ಟೆ ಬಂದ ಕೂಡಲೇ ನಾವು ಅದನ್ನು ಮನೆಯವರಿಗೆ ತಲುಪಿಸುತ್ತೇವೆ. ಆದರೆ ಈ ಬಾರಿ ಮೊಟ್ಟೆಗಳು ಹಾಳಾಗಿವೆ. ನಾವು ಮಕ್ಕಳಿಗೆ ಬೇಯಿಸಿದ ಸಂದರ್ಭದಲ್ಲೂ ಪೂರ್ತಿ ಹಾಳಾಗಿದ್ದು, ಕೆಲವಂತೂ ಕೊಳೆತು ನಾರುತ್ತಿದ್ದುದಲ್ಲದೆ ಹುಳಗಳು ಹರಿದಾಡುತ್ತಿದ್ದವು. ಹಿಂದೆಲ್ಲ ಶಿಶು ಅಭಿವೃದ್ಧಿ ಇಲಾಖೆಯಿಂದ ಹಣವನ್ನೇ ಕೊಡುತ್ತಿದ್ದರು. ನಾವೇ ಮೊಟ್ಟೆಗಳನ್ನು ಅಂಗಡಿಯಿಂದ ಖರೀದಿಸಿ ಮಕ್ಕಳಿಗೆ ನೀಡುತ್ತಿದ್ದೆವು. ಈಗ ರಾಜ್ಯ ವ್ಯಾಪ್ತಿಯಲ್ಲಿ ಟೆಂಡರ್ ಪಡೆದು ಪೂರೈಕೆ ಮಾಡುತ್ತಿದ್ದಾರೆ. ಇದರಿಂದಾಗಿ ಸಮಸ್ಯೆ ಆಗಿದೆ ಅಂತಿದ್ದಾರೆ.

ವಾರದ ಹಿಂದೆ ಹಾಸನ ಜಿಲ್ಲೆ ಸೇರಿದಂತೆ ಕೆಲವು ಕಡೆ ಕೊಳೆತ ಮೊಟ್ಟೆ ಪೂರೈಕೆ ಆಗಿದ್ದು ಕಂಡುಬಂದಿತ್ತು. ಇದರ ಬೆನ್ನಲ್ಲೇ ಹಾಳಾದ ಮೊಟ್ಟೆ ಪೂರೈಸಿದ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಹಾಕುತ್ತೇವೆ, ಮುಂದೆ ಅವರಿಗೆ ಗುತ್ತಿಗೆ ನೀಡುವುದಿಲ್ಲ ಎಂದು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅಬ್ಬರಿಸಿದ್ದರು. ಆದರೆ, ಇದರ ನಡುವೆಯೇ ಮಂಗಳೂರಿನಲ್ಲಿ ಕೊಳೆತ ಮೊಟ್ಟೆ ಪೂರೈಕೆ ಆಗಿದೆ. ಇದಲ್ಲದೆ, ಕೊಳೆತ ಮೊಟ್ಟೆಗಳನ್ನು ಲಾರಿಯವರು ಅಂಗನವಾಡಿಗೆ ತಂದಿರುವಾಗಲೇ ಆಸುಪಾಸಿನ ಮನೆಗಳಿಗೂ ಕಡಿಮೆ ದರದಲ್ಲಿ ನೀಡಿದ್ದರಂತೆ. ಬೋಂದೇಲ್ ಭಾಗದಲ್ಲಿ ಕಡಿಮೆ ಕ್ರಯಕ್ಕೆ ಮೊಟ್ಟೆ ಪಡೆದವರೂ ಹಾಳಾಗಿರುವುದನ್ನು ನೋಡಿ ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಈ ರೀತಿ ಹಾಳಾದ ಮೊಟ್ಟೆ ನೀಡಿರುವುದು ಬೆಳಕಿಗೆ ಬಂದಿದೆ.

By admin

Leave a Reply

Your email address will not be published. Required fields are marked *

error: Content is protected !!