ಬಂಟ್ವಾಳ: ಬೋಳಂತೂರು ಸುರಿಬೈಲಿನ ಯುವಕನನ್ನು ಇರಾ ಮುಳೂರುಪದವು ಗುಡ್ಡದಲ್ಲಿ ಕೊಲೆ ಮಾಡಿ ಸೀಮೆಎಣ್ಣೆ ಹಾಕಿ ಸುಟ್ಟು ಗುಡ್ಡದ ತುದಿಯಿಂದ ತೀರಾ ಆಳವಾದ ಹೊಂಡಕ್ಕೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಬಂಟ್ವಾಳ ಪೊಲೀಸರು ಮೃತದೇಹವನ್ನು ಹೊಂಡದಿಂದ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾತರಿಸಿದ್ದಾರೆ. ಪ್ರಕರಣದ ಆರೋಪಿ ಬೋಳಂತೂರು ನಿವಾಸಿ ಅಬ್ದುಲ್‌ ರಹಿಮಾನ್‌ ಯಾನೆ ಅದ್ರಾಮ (54)ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ನ. 14ರ ವರೆಗೆ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈತ ಬೋಳಂತೂರು ಸುರಿಬೈಲು ನಿವಾಸಿ ಅಬ್ದುಲ್‌ ಸಮದ್‌ (19)ನನ್ನು ಇರಾ ಮುಳೂರುಪದವು ಗುಡ್ಡದಲ್ಲಿ ಕೊಲೆ ಮಾಡಿ ಸೀಮೆಎಣ್ಣೆ ಹಾಕಿ ಸುಟ್ಟು ಹೊಂಡಕ್ಕೆ ಎಸೆದಿದ್ದ.

ಪ್ರಕರಣದ ವಿವರ

ಸಮಾದ್ ಹಾಗೂ ಅದ್ರಾಮ ಇಬ್ಬರು ಸ್ನೇಹಿತರಾಗಿದ್ದು ಗಾಂಜಾ ವ್ಯಸನಿಗಳಾಗಿದ್ದಾರೆ, ಜೊತೆಗೆ ಇವರೊಳಗೆ ಅನೈತಿಕ ವ್ಯವಹಾರಗಳು ನಡೆಯುತ್ತಿದ್ದವು. ಈ ವಿಚಾರ ಮನೆಯವರಿಗೆ ಗೊತ್ತಾಗಿ ಬಳಿಕ ಸಮಾದ್ ನನ್ನು ಉದ್ಯೋಗಕ್ಕಾಗಿ ಬೆಂಗಳೂರಿಗೆ ಕಳುಹಿಸಿದ್ದರು. ಗಾಂಜಾ ವ್ಯಸನದ ಜೊತೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸಮಾದ್ ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಹೋಗುವುದು ಅದ್ರಾಮನಿಗೆ ಇಷ್ಟವಿರಲಿಲ್ಲ. ಹಾಗಾಗಿ ಹೋಗುವದಕ್ಕೆ ಅನೇಕ ಬಾರಿ ವಿರೋಧ ವ್ಯಕ್ತಪಡಿಸಿದ್ದ ಎಂದು ಹೇಳಲಾಗಿದೆ‌. ಈ ಮಧ್ಯೆ ಅದ್ರಾಮ ಸಮಾದ್ ನನ್ನು ಊರಿಗೆ ಬರುವಂತೆ ಒತ್ತಾಯಿಸಿದ್ದು, ನ. 1 ರಂದು ಊರಿಗೆ ಬಂದಿದ್ದ ಸಮಾದ್ ಹಾಗೂ ಅದ್ರಾಮ ಇಬ್ಬರು ಸೇರಿ ಇರಾ ಜನನಿಬಿಡ ಗುಡ್ಡವೊಂದಕ್ಕೆ ಅದ್ರಾಮನ ರಿಕ್ಷಾದಲ್ಲಿ ಹೋಗಿದ್ದರು. ಅಲ್ಲಿ ಅವರು ಏನು ವ್ಯವಹಾರ ನಡೆದಿತ್ತು ಎಂಬುದು ಇನ್ನು ತನಿಖೆಯ ವೇಳೆ ಬಯಲಾಗಬೇಕಿದೆ. ಆದರೆ ಅರೋಪಿ ಪ್ರಾಥಮಿಕ ತನಿಖೆಯ ವೇಳೆ ಹೇಳಿದಂತೆ ಇಬ್ಬರು ಗಾಂಜಾ ಸೇವಿಸಿದ ಬಳಿಕ ಈತ ಬೆಂಗಳೂರಿಗೆ ತೆರಳದಂತೆ ಇವರಿಬ್ಬರ ಮಧ್ಯೆ ಜಗಳ ಆಗಿದೆ. ಬಳಿಕ ಇಬ್ಬರೂ ‌ಗುಡ್ಡೆಯಲ್ಲಿ ಮಲಗಿದ್ದರು. ಅ ಸಂದರ್ಭದಲ್ಲಿ ಅದ್ರಾಮ ರಿಕ್ಷಾದಲ್ಲಿ ಇರಿಸಿದ್ದ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗ ವಾಗಿದೆ ಎಂದು ಹೇಳಲಾಗಿದೆ. ಈ ವಿಚಾರವನ್ನು ಅದ್ರಾಮ ಅವರ ಸಂಬಂಧಿಯೊರ್ವನಿಗೆ ತಿಳಿಸಿದ ಕಾರಣ ಕೊಲೆ ವಿಚಾರ ಬಹಿರಂಗ ವಾಗಿದೆ. ಅವರೆಗೆ ಅದ್ರಾಮನ ಮನೆಯವರು ಈತ ಬೆಂಗಳೂರಿಗೆ ತೆರಳಿದ್ದಾನೆ ಎಂಬುದೇ ನಂಬಿಕೆಯಾಗಿತ್ತು.

ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ
ಘಟನೆಯ ಕುರಿತು ನೀಡಿದ ದೂರಿನಂತೆ ಪೊಲೀಸರು ನ. 8ರಂದು ಮೃತದೇಹಕ್ಕಾಗಿ ಹುಡುಕಾಟ ನಡೆಸಿ ರಾತ್ರಿಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದರು. ಬುಧವಾರ ಕಾರ್ಯಾಚರಣೆ ಮುಂದುವರಿಸಿ ಸ್ಥಳೀಯರ ನೆರವಿನಿಂದ ಮೃತದೇಹವನ್ನು ಹೊಂಡದಿಂದ ತೆಗೆದು ಸ್ಥಳದಲ್ಲೇ ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತವರ ತಂಡದವರು ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಯುವಕನ ಮನೆಯವರಿಗೆ ಹಸ್ತಾಂತರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಡಿಷನಲ್‌ ಎಸ್‌ಪಿ ಕುಮಾರಚಂದ್ರ, ಬಂಟ್ವಾಳ ಗ್ರಾಮಾಂತರ ಇನ್‌ಸ್ಪೆಕ್ಟರ್‌ ಟಿ.ಡಿ.ನಾಗರಾಜ್‌, ಪಿಎಸ್‌ಐ ಹರೀಶ್‌, ವಿಧಿ ವಿಜ್ಞಾನ ತಜ್ಞರ ತಂಡದವರು ಇದ್ದರು.

ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದ್ದು, ಈ ಕೃತ್ಯದಲ್ಲಿ ಇನ್ಯಾರಾದರೂ ಭಾಗಿಗಳಾಗಿ ದ್ದಾರೆಯೇ, ಕೊಲ್ಲುವುದಕ್ಕೆ ಪ್ರೇರೇಪಣೆ ಏನು, ಬಳಕೆಯಾದ ವಾಹನ, ಸೀಮೆಎಣ್ಣೆ ನೀಡಿದವರು ಯಾರು ಹೀಗೆ ವಿವಿಧ ಆಯಾಯಗಳಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ.

ದೂರಿನಲ್ಲಿರುವ ವಿವರ
ಘಟನೆಯ ಕುರಿತು ಆರೋಪಿಯ ಸಂಬಂಧಿ ಬೋಳಂತೂರು ಕೊಕ್ಕೆಪುಣಿ ನಿವಾಸಿ ಸಲೀಂ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆರೋಪಿಯು ನ. 7ರಂದು ರಾತ್ರಿ 8ರ ಸುಮಾರಿಗೆ ಸಲೀಂ ಮನೆಯ ಬಳಿ ಬಂದು ಅಗತ್ಯದ ಕೆಲಸದ ಹಿನ್ನೆಲೆಯಲ್ಲಿ ಒಂದು ಕಡೆಗೆ ಹೋಗಲಿದೆ. ತನ್ನ ರಿಕ್ಷಾದಲ್ಲಿ ಪೆಟ್ರೋಲ್‌ ಇಲ್ಲ ಎಂದು ಇಬ್ಬರೂ ಬೈಕಿನಲ್ಲಿ ಬೋಳಂತೂರು – ಮಂಚಿಕಟ್ಟೆ – ಮೋಂತಿಮಾರು ಮೂಲಕ ಇರಾಕ್ಕೆ ತೆರಳಿ ಬಳಿಕ ಗುಡ್ಡ ಭಾಗದ ರಸ್ತೆಯಲ್ಲಿ ಸುಮಾರು 2 ಕಿ.ಮೀ. ಹೋಗಿದ್ದಾರೆ. ಈ ವೇಳೆ ಆರೋಪಿಯು ತಾನು ನ. 1ರ ರಾತ್ರಿ 8.30ರ ಸುಮಾರಿಗೆ ಸುರಿಬೈಲಿನ ಅಬ್ದುಲ್‌ ಸಮಾದ್‌ನಲ್ಲಿ ಜಗಳ ಮಾಡಿ ಸೀಮೆಎಣ್ಣೆ ಹಾಕಿ ಬೆಂಕಿ ಕೊಟ್ಟು ಪಕ್ಕದ ಗುಡ್ಡದಲ್ಲಿ ಸಾಯಿಸಿದ್ದೇನೆ. ಹೆಣವನ್ನು ಗುಂಡಿಗೆ ಹಾಕಿ ಮುಚ್ಚಲು ಸಹಕರಿಸುವಂತೆ ಕೇಳಿಕೊಂಡಿದ್ದಾನೆ.

ಇದನ್ನು ಕೇಳಿ ಸಲೀಂ ಹೆದರಿ ನೇರವಾಗಿ ಅವರ ಮನೆಗೆ ಬಂದಿದ್ದು, ಭಯದಿಂದ ರಾತ್ರಿ ಜ್ವರ ಬಂದಿರುತ್ತದೆ.
ನ. 8ರಂದು ತನ್ನ ಅಣ್ಣ ಶರೀಫ್‌ನ ಬಳಿ ಆರೋಪಿ ಅಬ್ದುಲ್‌ ರಹಿಮಾನ್‌, ಅಬ್ದುಲ್‌ ಸಮಾದ್‌ನನ್ನು ಇರಾದಲ್ಲಿ ಕೊಲೆ ಮಾಡಿರುವ ವಿಚಾರ ತಿಳಿಸಿದ್ದ.

ಅನೈತಿಕ ಚಟುವಟಿಕೆ ತಾಣ
ಇರಾ ಗ್ರಾಮದ ಕೈಗಾರಿಕಾ ಪ್ರದೇಶದ ಒಂದು ಭಾಗದಲ್ಲಿ ಜೈಲು ನಿರ್ಮಾಣಗೊಳ್ಳುತ್ತಿದ್ದು, ಉಳಿದಂತೆ ಎಕರೆಗಟ್ಟಲೆ ಪ್ರದೇಶ ಖಾಲಿ ಇದೆ. ಕೆಐಎಡಿಬಿ ಅಧಿಕಾರಿಗಳ ನಿರ್ಲಕ್ಷéದಿಂದ ಈ ಜಾಗ ಕೈಗಾರಿಕೆಗಳಿಗೆ ಹಸ್ತಾಂತರವಾಗಿಲ್ಲ ಎಂದು ಸ್ಥಳೀಯರ ಆರೋ±ವಾಗಿದೆ. ಇಲ್ಲಿನ ಗುಡ್ಡ ಪ್ರದೇಶ ನಿರ್ವಹಣೆಯೇ ಇಲ್ಲವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. ಈ ಹಿಂದೆಯೂ ಇಲ್ಲಿ ಅನೈತಿಕ ಚಟುವಟಿಕೆಗಳ ಘಟನೆಗಳು ನಡೆದಿದ್ದು, ಬೈಕ್‌ ಸ್ಟಂಟ್‌ ನಡೆಸಿದ ಘಟನೆಯೂ ಸಂಭವಿಸಿತ್ತು. ಅನೈತಿಕ ಆಚಟುವಟಿಕೆಗಳಿಗೆ ಕೆಐಎಡಿಬಿ, ಪೊಲೀಸರ ಕ್ರಮವಿಲ್ಲದ ಕಾರಣ ಅದು ಅವ್ಯಾಹತವಾಗಿ ಮುಂದುವರಿದಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!