ಮಂಗಳೂರು, ಹತ್ಯೆಯಾದ ಬಿಜೆಪಿ ಯುವಮುಖಂಡ ಪ್ರವೀಣ್ ನೆಟ್ಟಾರು ಪತ್ನಿ ನೂತನಾ ಪ್ರವೀಣ್ ಅವರಿಗೆ ಮಂಗಳೂರಿನಲ್ಲೇ ಉದ್ಯೋಗ ಮುಂದುವರೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನ್ನ ಕಚೇರಿಯಲ್ಲೇ ಉದ್ಯೋಗ ದೊರಕಿಸಿಕೊಡುವ ಆದೇಶ ಹೊರಡಿಸಿದ್ದು ಇದು ಮುಖ್ಯಮಂತ್ರಿ ಪದವಿ ಇರುವ ತನಕ ಮಾತ್ರ, ನಂತರ ಸಿಎಂ ಬದಲಾವಣೆ ಆದಮೇಲೆ ಈ ಉದ್ಯೋಗದ ಭರವಸೆ ಇದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿತ್ತು. ಮಾತ್ರವಲ್ಲದೆ ಹಲವಾರು ಬಿಜೆಪಿ ಕಾರ್ಯಕರ್ತರಲ್ಲೂ ಈ ಗೊಂದಲ ಇತ್ತು. ಆದೇಶ ಪ್ರತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಎಂಬ ವಾಕ್ಯ ಇದ್ದು ಇದೂ ಗೊಂದಲಕ್ಕೆ ಕಾರಣವಾಗಿತ್ತು.

ಆದರೆ ಹಲವಾರು ಕಾನೂನು ತೊಡಕುಗಳನ್ನು ಮೀರಿಯೂ ಉದ್ಯೋಗ ಸೃಷ್ಟಿ ಮಾಡಿದ್ದರಿಂದ ಸದ್ಯದ ಮಟ್ಟಿಗೆ ಈ ಆದೇಶ ಹೊರಡಿಸಿದ್ದು ಇದು ಯಾವುದೇ ಕಾರಣಕ್ಕೂ ಗುತ್ತಿಗೆ ಆಧಾರದ ಉದ್ಯೋಗ ಅಲ್ಲ, ಖಂಡಿತವಾಗಿಯೂ ಇದು ಶಾಶ್ವತ ಸರ್ಕಾರಿ ಉದ್ಯೋಗ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಅಥವಾ ಸರ್ಕಾರ ಬದಲಾದರೂ ಉದ್ಯೋಗಕ್ಕೆ ಕುತ್ತು ಬಾರದು ಎಂದು ಸಂಸದರು ತಿಳಿಸಿದ್ದಾರೆ.

ಪ್ರವೀಣ್ ನೆಟ್ಟಾರ್ ಅವರ ಪತ್ನಿಯ ಬೇಡಿಕೆಯಂತೆ ಬೆಂಗಳೂರಿನಲ್ಲಿ ಉದ್ಯೋಗ ನಿರ್ವಹಿಸಲು ಅಸಾಧ್ಯವಾಗಿತ್ತು. ಇದನ್ನು ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರವೀಣ್ ನೆಟ್ಟಾರ್ ಅವರ ಪತ್ನಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಉದ್ಯೋಗವನ್ನು ಸೃಷ್ಟಿಸಿ ನಂತರ ಅದನ್ನು ಮಂಗಳೂರಿಗೆ ಡೆಪ್ಯೂಟೇಷನ್ ಮೂಲಕ ಮಂಗಳೂರಿನಲ್ಲೇ ಉದ್ಯೋಗ ನಿರ್ವಹಿಸಲು ಅವಕಾಶ ಮಾಡಿಕೊಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಈ ಬೇಡಿಕೆಗೂ ಮನ್ನಣೆ ನೀಡಿದ್ದು ಇನ್ನು ಕೆಲವೇ ದಿನಗಳಲ್ಲಿ ಪ್ರವೀಣ್ ನೆಟ್ಟಾರ್ ಪತ್ನಿಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಅಥವಾ ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ಸರ್ಕಾರಿ ಉದ್ಯೋಗ ಲಭಿಸಲಿದೆ. ಈ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೆಟ್ಟಾರ್ ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕ ಹಾಗೂ ಸಹಕರಿಸುತ್ತಿದ್ದಾರೆ ಎಂಬ ಮಾತಿಗೆ ಮತ್ತಷ್ಟು ಬಲ ಬಂದಂತಾಗಿದೆ.

By admin

Leave a Reply

Your email address will not be published. Required fields are marked *

error: Content is protected !!