ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಇದರ ಆಶ್ರಯದಲ್ಲಿ ಐಸಿವೈಎಂ ಹಾಗೂ ಕಥೋಲಿಕ ಸಭಾ ಫಟಕ ಪೆರುವಾಯಿ ಸಹಯೋಗದೊಂದಿಗೆ “ಗದ್ದೆಯಲ್ಲಿ ಗಮ್ಮತ್ತು” ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ನಾವೆಲ್ಲ ದೇವರ ಮಕ್ಕಳು. ನಮ್ಮಲ್ಲಿ ಯಾವುದೇ ಬೇಧ ಇರಬಾರದು. ಈ ಪ್ರಕೃತಿಯನ್ನು ಭಗವಂತ ನಮಗೋಸ್ಕರ ಸೃಷ್ಟಿ ಮಾಡಿದ್ದಾನೆ. ಬದುಕಿರುವಷ್ಟು ಕಾಲ ನಾವು ಕುಡಿಯುವ ನೀರು, ಸೇವಿಸೋ ಗಾಳಿ, ರಕ್ತ, ರಕ್ತದ ಬಣ್ಣ ಎಲ್ಲವೂ ಒಂದೇ ಆಗಿದೆ. ಅದಿದ್ದರೂ ನಾವು ಜಗತ್ತಿನಲ್ಲಿ ಅಜ್ಞಾನಿಗಳಿರುತ್ತೇವೆ. ಆದ್ದರಿಂದ ಸಹಬಾಳ್ವೆಯಿಂದ ಬಾಳಬೇಕು ಎಂದು ಸಂದೇಶ ನೀಡಿದರು.
ವೈಯುಕ್ತಿಕ ಜಂಜಾಟದ ನಡುವೆ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರೂ ಇಡೀ ದಿನ ಕೆಸರಿನಲ್ಲಿ ಮಿಂದೆದ್ದರು. ಇದೇ ವೇಳೆ ಸ್ಥಳೀಯ ಬಾಂಧವರಿಗೂ ಮಡಕೆ ಒಡೆಯುವುದು ಸೇರಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಶ್ರೀ ಕ್ಷೇತ್ರ ಕುಕ್ಕಾಜೆಯ ಶ್ರೀ ಶ್ರೀ ಕೃಷ್ಣ ಗೂರೂಜಿ ಮಾತನಾಡಿ, ನಮಗೆ ಭೂಮಿಯಲ್ಲಿರುವುದಕ್ಕೆ ಅವಕಾಶವಿರುವುದು ಮೂರೇ ದಿನ. ಹುಟ್ಟು ಮತ್ತು ಸಾವಿನ ಮಧ್ಯದ ಜೀವನವನ್ನು ನಾವು ಚೆನ್ನಾಗಿ ಅರ್ಥೈಸಿಕೊಂಡು ಬದುಕಿದಾಗ ಮನುಷ್ಯನ ಜೀವನಕ್ಕೆ ಮೌಲ್ಯ ಸಿಗುತ್ತದೆ ಎಂದರು.
ವಂದನೀಯ ವಿಶಾಲ್‌ ಮೋನಿಸ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಮಾತನಾಡುವುದು ಕಡಿಮೆ. ನನ್ನ ಕೆಲಸಗಳು ಮಾತನಾಡುತ್ತಿವೆ. ಗದ್ದೆಯ ಆಟ ಕೇವಲ ಮನೋರಂಜನೆ ದೃಷ್ಟಿಯಿಂದಲ್ಲ. ಬದಲಾಗಿ ಒಟ್ಟು ಸೇರಿ ಒಬ್ಬನ್ನೊಬ್ಬರನ್ನು ಅರಿತು ಒಳ್ಳೆಯ ಕಾರ್ಯವನ್ನು ಮಾಡುವುದಾಗಿದೆ ಎಂದರು.
ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಬ್ರಿಜೇಶ್‌ ಚೌಟ, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯ್ಸ್‌, ಪೆರುವಾಯಿ ಗ್ರಾ.ಪಂ ಅಧ್ಯಕ್ಷ ಕೆ. ಬಾಲಕೃಷ್ಣ ಪೂಜಾರಿ, ಸದಸ್ಯ ವರುಣ್‌ ರೈ, ರಶ್ಮಿ ಎಂ, ಮಾಣಿಲ ಗ್ರಾ.ಪಂ ಉಪಾಧ್ಯಕ್ಷ ರಾಜೇಶ್‌ ಬಾಳೆಕಲ್ಲು, ಕೊಲ್ಲತ್ತಡ ಶಾಲೆಯ ಮುಖ್ಯೋಪಾಧ್ಯಾಯ ಕುಂಞ ನಾಯ್ಕ್‌, ಅಬ್ದುಲ್‌ ರಜಾಕ್‌, ನಾಗೇಶ್‌ ಪಾಟಾಳಿ, ಚರ್ಚ್‌ ಪಾಲನಾ ಮಂಡಳಿ ಉಪಾಧ್ಯಕ್ಷ ವಿನ್ಸೆಂಟ್‌ ಡಿ’ಸೋಜ, ಕಾರ್ಯದರ್ಶಿ ವಿಲಿಯಂ ಡಿ’ಸೋಜ, ಕಥೋಲಿಕ್‌ ಸಭಾದ ಘಟಕ ಅಧ್ಯಕ್ಷ ರಾಲ್ಫ್‌ ಡಿಸೋಜ, ಐಸಿವೈಎಂ ಘಟಕ ಅಧ್ಯಕ್ಷೆ ದೀಕ್ಷಿತ ಡಿ’ಸೋಜ ಸೇರಿ ಹಲವರಿದ್ದರು.

By admin

Leave a Reply

Your email address will not be published. Required fields are marked *

error: Content is protected !!