ಬೆಂಗಳೂರು : ಉದ್ಯಮಿಯೋರ್ವರ ಕೊಲೆ ಪ್ರಕರಣದ ಆರೋಪಿಯೋರ್ವ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಆದರೆ ಇದೀಗ ಪೇಸ್ ಬುಕ್ ಪೋಸ್ಟ್ ನಲ್ಲಿ ಸಿಕ್ಕಿದ ಮಾಹಿತಿಯಿಂದ ಆರೋಪಿಯನ್ನು  ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಮಧು ಅಲಿಯಾಸ್‌ ಮಧುಸೂದನ್‌ (28) ಎಂಬಾತನೆ ಬಂಧಿತ ಆರೋಪಿ.

2014ರಲ್ಲಿ ಲಕ್ಕಸಂದ್ರದ ಉದ್ಯಮಿ ಉದಯ್‌ರಾಜ್‌ ಸಿಂಗ್‌ನನ್ನು ಕೊಲೆಗೈದು, ಅವರ ಬಳಿಯಿದ್ದ ಸುಮಾರು 18 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನಾಭರಣ ಕದ್ದೊಯ್ದಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಮಧು ಜೈಲು ಸೇರಿದ್ದ. 2017ರಲ್ಲಿ ತಮ್ಮ ತಾಯಿಗೆ ತೀವ್ರ ಅನಾರೋಗ್ಯದ ಕಾರಣ ನೀಡಿ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗಡೆ ಬಂದಿದ್ದ. ಬಳಿಕ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಹಾಜರಾಗದೆ ಹೊರರಾಜ್ಯಗಳಲ್ಲಿ ತಲೆ ಮರೆಸಿಕೊಂಡಿದ್ದ.

ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಮಧು, ಸ್ನೇಹಿತನ ಜತೆ ಮಾಲ್‌ವೊಂದಕ್ಕೆ ತೆರಳಿದ್ದ. ಇಬ್ಬರು ಮಾಲ್‌ನಲ್ಲಿದ್ದಾಗ ತೆಗೆದುಕೊಂಡಿದ್ದ ಫೋಟೋವನ್ನು ಆತನ ಸ್ನೇಹಿತ ಫೇಸ್‌ಬುಕ್‌ಗೆ ಪೋಸ್ಟ್‌ ಮಾಡಿದ್ದ. ಈ ಕುರಿತು ಮಾಹಿತಿ ಪಡೆದು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿ ಮಧುವನ್ನು ಬಂಧಿಸಿದ್ದಾರೆ.

ಆರೋಪಿ ಮಧು ಬಂಧನ ಸಂಬಂಧ ಅಧೀನ ನ್ಯಾಯಾಲಯ ಹಲವು ವಾರಂಟ್‌ ಹೊರಡಿಸಿತ್ತು. ಉದ್ಘೋಷಣೆ ಸಹ ಪ್ರಕಟಿಸಿತ್ತು. ಆತನ ಬಂಧನಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರೂ ಸಣ್ಣ ಸುಳಿವು ಕೂಡ ದೊರೆತಿರಲಿಲ್ಲ. ಹೀಗಾಗಿ, ಉದಯ್‌ರಾಜ್‌ ಸಿಂಗ್‌ ಕೊಲೆ ಪ್ರಕರಣದ ದೋಷಾರೋಪ ಪಟ್ಟಿಯನ್ನು ಪ್ರತ್ಯೇಕಿಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿ ಮಧು ಹೊರತುಪಡಿಸಿ, ಉಳಿದ ಆರೋಪಿಗಳಾದ ಶ್ರೀರಂಗ ಅಭಿಷೇಕ್‌ ಸೇರಿ ಐವರಿಗೆ ಜೀವಾವಧಿ ಶಿಕ್ಷೆ ಹಾಗೂ 1ಲಕ್ಷ ರೂ. ದಂಡ ವಿಧಿಸಿ 2019ರಲ್ಲಿತೀರ್ಪು ನೀಡಿತ್ತು. ಈ ಮಾಹಿತಿ ತಿಳಿದುಕೊಂಡಿದ್ದ ಮಧು ತಾನು ಶರಣಾದರೂ ಜೀವಾವಧಿ ಶಿಕ್ಷೆ ಕಾಯಂ ಆಗಲಿದೆ ಎಂದು ಭಯಗೊಂಡು ಮಹಾರಾಷ್ಟ್ರದ ಪುಣೆ, ಬಿಹಾರದ ಪಟ್ನಾ ಸೇರಿ ಹಲವೆಡೆ ಉಳಿದುಕೊಂಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!