ಗುರುವೃಂದ, ಪೋಷಕರ ಸಮರ್ಪಣಾ ಭಾವದಿಂದ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ಕುಕ್ಕಾಜೆ ಶ್ರೀ ಕಾಳಿಕಾ ಅಂಜನೇಯ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀಕೃಷ್ಣ ಗುರೂಜಿ ಹೇಳಿದರು.
ಅವರು ದಿನಾಂಕ 02-10-2023ರಂದು ಸೋಮವಾರ ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ನಡೆದ ಗಾಂಧೀ ಹಾಗೂ ಶಾಸ್ತ್ರೀ ಜಯಂತಿ ಹಾಗೂ ನವೀಕರಣಗೊಂಡ ಶಾಲಾ ಸಭಾವೇದಿಕೆಯ ಉದ್ಘಾಟನೆ ಹಾಗೂ ವರ್ಗಾವಣೆಗೊಂಡ ಶಿಕ್ಷಕ ಭುವನೇಶ್ವರ್ ಸಿ ಇವರ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತಾಡಿದರು. ನವೀಕರಣಗೊಂಡ ಸಭಾವೇದಿಕೆಯನ್ನು ಉದ್ಘಾಟಿಸಿ ಶುಭ ಹಾರೈಸಿದ ಅವರು ಶಾಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವಂತೆ ತಿಳಿಸುತ್ತಾ ತನ್ನ ಪೂರ್ಣ ಸಹಕಾರದ ಭರವಸೆ ನೀಡಿದರು.
ರಾಷ್ಟ್ರ ನಾಯಕರಾದ ಗಾಂಧೀ ಹಾಗೂ ಶಾಸ್ತ್ರೀ ಜನ್ಮದಿನದ ಈ ಸಂದರ್ಭದಲ್ಲಿ ಇಬ್ಬರು ಮಹಾನ್ ಚೇತನರ ಆದರ್ಶಗಳನ್ನು ಸ್ಮರಿಸುತ್ತಾ ಪುಷ್ಪನಮನ ಸಲ್ಲಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದರಾದ ಹರೀಶ್ ಬಳಂತಿ ಮುಗರು 15 ವರ್ಷಗಳ ಕಾಲ ಶಿಕ್ಷಕರಾಗಿ ಹಾಗೂ ಪ್ರಭಾರ ಮುಖ್ಯ ಗುರುಗಳಾಗಿ ಅನುಪಮ ಸೇವೆ ಸಲ್ಲಿಸಿ ವರ್ಗಾವಣೆ ಹೊಂದಿರುವ ಭುವನೇಶ್ವರ್ ಸಿ ಅವರನ್ನು ಅಭಿನಂದಿಸುತ್ತಾ ಆಂಗ್ಲ ಭಾಷಾ ಶಿಕ್ಷಕರಾಗಿ ಅವರ ಬೋಧನಾ ಕೌಶಲ, ಸರಳ ಸಜ್ಜನಿಕೆ, ಶುದ್ಧ ಮನಸ್ಸಿನ ವ್ಯಕ್ತಿತ್ವ ಹಾಗೂ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳಿಂದ ಅವರು ಗಳಿಸಿದ ಪ್ರೀತಿ ಗೌರವಾದರಗಳನ್ನು ಉಲ್ಲೇಖಿಸಿ ಶುಭಹಾರೈಸಿದರು.
ಎಸ್ ಡಿ ಎಂಸಿ ಸದಸ್ಯರಾದ ವಿಷ್ಣು ಕನ್ನಡಗುಳಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು. ಆಂಗ್ಲ ಭಾಷಾ ಶಿಕ್ಷಕರಾಗಿ ನೇಮಕಗೊಂಡು 15 ವರ್ಷಗಳ ಕಾಲ ಶಿಕ್ಷಕರಾಗಿ, ಪ್ರಭಾರ ಮುಖ್ಯಗುರುಗಳಾಗಿ ವಿದ್ಯಾರ್ಥಿಗಳು, ಪೋಷಕರು, ವಿದ್ಯಾಭಿಮಾನಿಗಳೆಲ್ಲರ ಪ್ರೀತಿ ಗೌರವಗಳಿಗೆ ಪಾತ್ರರಾದ ಭುವನೇಶ್ವರ್ ಸಿ. ಮಡಗಾಂವಕರ್ ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಹಳೆ ವಿದ್ಯಾರ್ಥಿ ಬಳಗ, ಪೋಷಕರು, ವಿದ್ಯಾರ್ಥಿಗಳು , ಸ್ಥಳೀಯ ಸಂಘ ಸಂಸ್ಥೆಯವರೂ ಸಹ ಅವರನ್ನು ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.
ನಿವೃತ್ತ ಶಿಕ್ಷಕರಾದ ಅನಂತ ಭಟ್ ಮುಜೂರು ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು.
ಸನ್ಮಾನವನ್ನು ಸ್ವೀಕರಿಸಿದ ಭುವನೇಶ್ವರ್ ಸಿ ಅವರು ಎಲ್ಲರ ಪ್ರೀತಿ ಆದರಗಳಿಗೆ ಕೃತಜ್ಞತೆ ಸಲ್ಲಿಸಿದರು.
ಮಾಣಿಲ ಗ್ರಾ.ಪಂ.ಅಧ್ಯಕ್ಷರಾದ ಶ್ರೀಧರ್ ಬಾಳೆಕಲ್ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯರಾದ ನಡುಮನೆ ಮಹಾಬಲ ಭಟ್, ರಾಜೇಶ್ ಕುಮಾರ್ ಬಾಳೆಕಲ್ಲು, ನಿವೃತ್ತ ಮುಖ್ಯ ಗುರುಗಳಾದ ಸುಬ್ರಹ್ಮಣ್ಯ ಭಟ್ ಕೆ ಜಿ , ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಪ್ರಸಾದ್ ಸೊರಂಪಳ್ಳ, ಮಾತನಾಡಿದರು. ಸಹಶಿಕ್ಷಕ ಸುಧೀಶ್ ಕೆ ದಿನದ ಮಹತ್ವ ವಿವರಿಸಿದರು. ಸಹಶಿಕ್ಷಕಿ ಕವಿತಾ ಕೆ ಸನ್ಮಾನ ಪತ್ರ ವಾಚಿಸಿ ಸನ್ಮಾನಿತರನ್ನು ಅಭಿನಂದಿಸಿದರು.
ಪ್ರಭಾರ ಮುಖ್ಯೋಪಾಧ್ಯಾಯಿನಿ ಲತಾ ಯು ಎಲ್ಲರನ್ನೂ ಸ್ವಾಗತಿಸಿ ಬೀಳ್ಕೊಡುತ್ತಿರುವ ಶಿಕ್ಷಕರಿಗೆ ಶುಭ ಹಾರೈಸಿದರು. ಸಹೋದ್ಯೋಗಿಗಳಾದ ಮಮತಾ ರಾವ್ ಬಿ , ಸೀತಾಲಕ್ಷ್ಮಿ ಬಲ್ಲಾಳ್, ತನುಶ್ರೀ ಸನ್ಮಾನಿತರಿಗೆ ಶುಭಾಶಯ ಕೋರಿದರು. . ದೈಹಿಕಶಿಕ್ಷಣ ಶಿಕ್ಷಕ ಉಮಾನಾಥ ರೈ ಮೇರಾವು ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ಸಂದೇಶ್ ವಂದಿಸಿದರು.

By admin

Leave a Reply

Your email address will not be published. Required fields are marked *

error: Content is protected !!