ಉಳ್ಳಾಲ: ನಾಡಿನ ಕೃಷಿಮೂಲ ಸಂಸ್ಕೃತಿಯ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಜಾಗೃತಿಗೊಳಿಸುವ ಕಾರ್ಯದಲ್ಲಿ ವಿದ್ಯಾರತ್ನ ಶಾಲೆ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿದೆ ಎಂದು ರತ್ನ ಎಜ್ಯುಕೇಷನ್‌ ಟ್ರಸ್ಟ್‌ ನಡೆಸುವ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ.
ಅವರು ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ  ಮಾಧ್ಯಮ ಶಾಲೆಯ ಎಸ್‌ ಎಸ್‌ ಎಲ್‌ ಸಿಯ  ೮೦ ಮಂದಿ ವಿದ್ಯಾರ್ಥಿಗಳು ಹರೇಕಳ ಗ್ರಾಮದ ಕುತ್ತಿಮೊಗರು ಜಾತ್ರೆ ನಡೆಯುವ ಪೆಲತ್ತಡಿ ಮತ್ತು ಧರಿಗದ್ದೆಯ  ಹಡಿಲು ಬಿದ್ದ ಒಂದೂವರೆ ಎಕರೆ ಗದ್ದೆಯಲ್ಲಿ ನಡೆಸಿದ ನಾಟಿ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷಿ ಬದುಕು, ಕೃಷಿಕರ ಕೌಟುಂಬಿಕ ಜೀವನದ ಮಹತ್ವ, ಕೃಷಿಮೂಲವನ್ನು ಅನುಸರಿಸಿ ಯಶಸ್ವಿಯಾದವರ ಪರಿಚಯ , ಕೃಷಿಮೂಲ  ಸಂಸ್ಕೃತಿಯೇ  ಪ್ರಧಾನ ಅನ್ನುವುದನ್ನು ಒಂದು ದಿನದ ನಾಟಿ ಕಾರ್ಯವನ್ನು ಅವರ ಕೈಯಿಂದಲೇ ನೆರವೇರಿಸುವ ಮೂಲಕ ತಿಳುವಳಿಕೆ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ತಾಯಿಯ ಹೆಸರಿನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ  ಅವರ ಊರಿನಲ್ಲೇ ಕೃಷಿಕಾಯಕವನ್ನು ಮಾಡುವ ಜವಾಬ್ದಾರಿಯನ್ನು  ಮಾಡಿದ್ದೇವೆ. ಅಂಬ್ಲಮೊಗರು, ಹರೇಕಳ, ಪಾವೂರು ಗ್ರಾಮಸ್ಥರು ಸೇರಿ ಅದ್ಧೂರಿಯಾಗಿ ನಡೆಸುವ ಪವಿತ್ರ ಪ್ರಸಿದ್ಧ ಕುತ್ತಿಮೊಗರು ಜಾತ್ರೆ ನಡೆಯುವ ಸ್ಥಳದಲ್ಲೇ ಕೃಷಿ ಕಾರ್ಯದಲ್ಲಿ ಭಾಗಿಯಾಗಿದ್ದೇವೆ. ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿಯನ್ನು ನೀಡುವ ಕಾರ್ಯವನ್ನು ಶಾಲಾ ಆಡಳಿತ ಮಂಡಳಿ ನಡೆಸುತ್ತಾ ಬಂದಿತ್ತು. ಕೋವಿಡ್‌ ಕಾರಣದಿಂದಾಗಿ ಮೊಟಕುಗೊಂಡಿದ್ದು, ಇದೀಗ ಮತ್ತೆ ಆರಂಭಿಸಿದ್ದೇವೆ. ಗದ್ದೆ, ಕೃಷಿ, ಭತ್ತನಾಟಿಯ ಜ್ಞಾನ ಕಡಿಮೆಯಿದೆ, ಇಂತಹ ಚಟುವಟಿಕೆಗಳಿಂದ ಕೃಷಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಒಲವು ಮೂಡಲು ಸಾಧ್ಯ. ಕೃಷಿ ಕಾರ್ಮಿಕರ ಕೊರತೆ ಬಹಳಷ್ಟಿದೆ.  ಭತ್ತದ ಬೆಳೆದು ನಿಂತಾಗ ವಿದ್ಯಾರ್ಥಿಗಳನ್ನು ಕರೆತರಲಾಗುವುದು. ಕಠಾವು ನಡೆಸುವ ಕುರಿತು ಮಾಹತಿಯನ್ನು ನೀಡಲಾಗುವುದು ಎಂದರು.
ಈ ಸಂದರ್ಭ ಹಿರಿಯ ಕೃಷಿಕ ಕೊರಗಪ್ಪ ಶೆಟ್ಟಿ ಉಳಿದೊಟ್ಟು  ರೈತ ಮುಖಂಡ ಸಂಪಿಗೆದಡಿ ಮನೋಹರ್‌ ರೈ, ನಂದರಾಮ ರೈ ಸಂಪಿಗೆದಡಿ, ಭಾಸ್ಕರ್‌ ರೈ ಸಂಪಿಗೆದಡಿ, ವಿಜಯ ಕುಮಾರ್‌ ಶೆಟ್ಟಿ ಉಳಿದೊಟ್ಟು, ದೇವರಾಜ್‌ ರೈ,  ರತ್ನ ಎಜ್ಯುಕೇಷನ್‌ ಟ್ರಸ್ಟ್‌ ಕಾರ್ಯದರ್ಶಿ ಸೌಮ್ಯ ಆರ್‌ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ನಯೀಮಾ ಹಮೀದ್‌ ಉಪಸ್ಥಿತರಿದ್ದರು.

By admin

Leave a Reply

Your email address will not be published. Required fields are marked *

error: Content is protected !!