ತಲಪಾಡಿ ಗ್ರಾಮ ಪಂಚಾಯಿತಿನಲ್ಲಿ ಗುರುವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಎಸ್‌ ಡಿಪಿಐ ಅಭ್ಯರ್ಥಿಗೆ ಬೆಂಬಲಿಸಿದ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರನ್ನು ಜಿಲ್ಲಾಧ್ಯಕ್ಷರ ಆದೇಶದಂತೆ ತಕ್ಷಣದಿಂದ ಪಕ್ಷದ ಚಟುವಟಿಕೆಗಳಿಂದ ಉಚ್ಛಾಟಿಸಲಾಗುವುದು ಹಾಗೂ ಮುಂದಿನ ಆರು ವರ್ಷಗಳ ಕಾಲ ಪಕ್ಷಕ್ಕೆ ಬರದಂತೆ ನಿರ್ಭಂಧಿಸಲಾಗುವುದು ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್‌ ಪಂಡಿತ್‌ ಹೌಸ್‌ ಹೇಳಿದ್ದಾರೆ.ಅವರು ಪಂಡಿತ್‌ ಹೌಸ್‌ ನ ಚುನಾವಣಾ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತಲಪಾಡಿ ಗ್ರಾ.ಪಂ.ನಲ್ಲಿ ಒಟ್ಟು ಸಂಖ್ಯಾಬಲ ೨೪ ಇದ್ದು, ೧೩ ಬಿಜೆಪಿ ಬೆಂಬಲಿತರು, ೯ ಮಂದಿ ಎಸ್‌ಡಿಪಿಐ ಬೆಂಬಲಿತರು ಹಾಗೂ ಒಬ್ಬರು ಕಾಂಗ್ರೆಸ್‌ ಬೆಂಬಲಿತರಾಗಿದ್ದರು. ಬಿಜೆಪಿಯ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಪಕ್ಷದ ತೀರ್ಮಾನದಂತೆ ಸತ್ಯರಾಜ್‌ ಎಂಬವರನ್ನು ಅಧ್ಯಕ್ಷರಾಗಿ ಸೂಚಿಸಿತ್ತು. ಪಂ. ಸದಸ್ಯರು ಕೂಡಾ ನಿರೀಕ್ಷಿತ ಗೆಲುವಿನ ಅಭ್ಯರ್ಥಿಯಾಗಿ ಸತ್ಯರಾಜ್‌ ಅವರನ್ನು ಕಂಡಿತ್ತು. ಎಸ್‌ ಡಿಪಿಐ ನ ಆಸೆ ಆಮಿಷಗಳಿಗೆ ಬಲಿಯಾಗಿ ಹಾಗೂ ಒತ್ತಡದಿಂದ ಮಹಮ್ಮದ್‌ ಫಯಾಝ್‌ ಮತ್ತು ಮಹಮ್ಮದ್‌ ಎಂಬ ಬಿಜೆಪಿ ಬೆಂಬಲಿತ ಇಬ್ಬರು ಪಂಚಾಯಿತಿ ಸದಸ್ಯರು ಅಡ್ಡಮತದಾನ ಮಾಡಿ ಎಸ್‌ ಡಿಪಿಐ ಗೆಲುವಿಗೆ ಕಾರಣರಾಗಿದ್ದಾರೆ. ಈ ಬಗ್ಗೆ ಪಕ್ಷ ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರ ಮೊಹಮ್ಮದ್‌ ತಪ್ಪನ್ನು ಕೇಳಿಕೊಂಡಿದ್ದಾರೆ. ಫಯಾಝ್‌ ಅವರು ಮಾತ್ರ ಇಂದು ಚುನಾವಣಾ ಕಾರ್ಯಾಲಯದಲ್ಲಿ ಕ್ಷೇತ್ರ ಬಿಜೆಪಿ ಕರೆದಿದ್ದ ಸಭೆಗೆ ಗೈರಾಗಬಾರದೆಂದು ಹೇಳಿದ್ದರೂ, ಎಸ್‌ ಡಿಪಿಐ ಜೊತೆಗೆ ಅವರು ಒಳಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಸಭೆಗೆ ಗೈರು ಹಾಜರಾಗಿದ್ದಾರೆ. ಇದು ಒಳಒಪ್ಪಂದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಯಾವುದೇ ಕಾರಣಕ್ಕೆ ಎಸ್‌ ಡಿ ಪಿಐ ಸಿದ್ಧಾಂತವನ್ನು ಒಪ್ಪುವುದಿಲ್ಲ. ಬೆಂಬಲವನ್ನು ನೀಡುವುದಿಲ್ಲ, ಬಿಜೆಪಿ ಅಧಿಕಾರದ ಆಸೆಗಾಗಿ ಇರುವ ಪಕ್ಷವೇ ಇಲ್ಲ. ಸಾರ್ವಜನಿಕವಾಗಿ ತಪ್ಪು ಸಂದೇಶ ಹೋಗಿದೆ. ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಹಿಂದುಳಿದ ವರ್ಗ ಬಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಪುಷ್ಪಾವತಿ ಒಬ್ಬರೇ ಇದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯಾವುದೇ ಪಕ್ಷದ ಬೆಂಬಲದಿಂದ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ ಎಂದರು. ಇಬ್ಬರು ಬೆಂಬಲಿತ ಸದಸ್ಯರನ್ನು ಪಕ್ಷ ದ್ರೋಹ ಮತ್ತು ಅನ್ಯಾಯಕ್ಕಾಗಿ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ೬ ವರ್ಷದ ಕಾಲ ಪಕ್ಷದ ಸಾಮಾನ್ಯ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ. ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಆದೇಶ ಜಾರಿಗೆ ಬರಲಿದ್ದು, ಇದನ್ನು ಘೋಷಣೆ ಮಾಡುತ್ತಿದ್ದೇವೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಸಂತೋಷ್‌ ರೈ ಬೋಳಿಯಾರ್‌, ಜಿಲ್ಲಾ ಪ್ರ. ಕಾ ಕಸ್ತೂರಿ ಪಂಜ, ಜಿಲ್ಲಾ ಕಾರ್ಯದರ್ಶಿಗಳಾದ ರಣದೀಪ್‌ ಕಾಂಚನ್‌, ಸತೀಶ್‌ ಕುಂಪಲ, , ಜಯಶ್ರೀ ಕರ್ಕೇರ, ಹೇಮಂತ್‌ ಶೆಟ್ಟಿ, ನವೀನ್‌ ಪಾದಲ್ಪಾಡಿ, ತಲಪಾಡಿ ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾವತಿ ಶೆಟ್ಟಿ, ತಲಪಾಡಿ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ ಉಪಸ್ಥಿತರಿದ್ದರು.

By admin

Leave a Reply

Your email address will not be published. Required fields are marked *

error: Content is protected !!