ಬೆಂಗಳೂರು, ಮೇ 31: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಭಾರತೀಯ ಆಡಳಿತ ಸೇವೆಯ ಹಿರಿಯ ಅಧಿಕಾರಿ ವಂದಿತಾ ಶರ್ಮಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತೀಚಿಗೆ ಮುಖ್ಯಕಾರ್ಯದರ್ಶಿಯನ್ನಾಗಿ ವಂದಿತಾ ಅವರನ್ನು ಸರಕಾರ ಘೋಷಣೆ ಮಾಡಿತ್ತು.

ಈ ಹಿಂದೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಪಿ. ರವಿಕುಮಾರ್ ಅವರ ನಿವೃತ್ತಿಯ ಕಾರಣದಿಂದಾಗಿ ಈ ಹುದ್ದೆ ತೆರವಾಗಿತ್ತು. ಇದೀಗ ನೂತನ ಮುಖ್ಯಕಾರ್ಯದರ್ಶಿಯಾಗಿ ವಂದಿತಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986ನೇ ಸಾಲಿನಲ್ಲಿ ವಂದಿತಾ ಶರ್ಮಾ ನಾಗರಿಕ ಸೇವೆಗೆ ಆಯ್ಕೆಯಾಗಿದ್ದರು. ರಾಜ್ಯ ಸರಕಾದ ಇತಿಹಾಸದಲ್ಲಿ ವಂದಿತಾ ಅವರು ಮುಖ್ಯಕಾರ್ಯದರ್ಶಿಯಾಗುವ ಮೂಲಕ ನಾಲ್ಕನೇ ಮಹಿಳಾ ಮುಖ್ಯಕಾರ್ಯದರ್ಶಿ ಎಣಿಸಿಕೊಂಡಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ 39 ನೇ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.

ಪಂಜಾಬ್‌ ಮೂಲದ ವಂದಿತಾ ಶರ್ಮಾ ರಾಜ್ಯ ಐಎಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷೆಯಾಗಿದ್ದಾರೆ. ಸಮಾಜಶಾಸ್ತ್ರದಲ್ಲಿ ಪದವಿ ಹಾಗು ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಂದಿತಾ ಅವರು ದಕ್ಷ ಅಧಿಕಾರಿ ಎಂದು ಹೆಸರಾಗಿದ್ದರು. 36 ವರ್ಷಗಳ ಸೇವಾವಧಿಯಲ್ಲಿ ಜಿಲ್ಲಾಡಳಿತ, ಕಂದಾಯ, ಕೃಷಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಸಹಿತ ಹಲವು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಕೋವಿಡ್‌ ಸಂದರ್ಭದಲ್ಲಿ ಲಸಿಕೆ ವಿತರಣೆಗೆ ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಕೇಂದ್ರ ಸರ್ಕಾರದಲ್ಲಿ ಬಾಹ್ಯಾಕಾಶ ಇಲಾಖೆಯಲ್ಲೂ ಕಾರ್ಯ ನಿರ್ವಹಿಸಿದ್ದರು. ವಂದಿತಾ ಅವರ ಪತಿ ಐಎಸ್‌ಎನ್‌ ಪ್ರಸಾದ್‌ ಕೂಡ ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದು, ರಾಜ್ಯದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ವಂದಿತಾ ಶರ್ಮಾ ಮುಖ್ಯ ಕಾರ್ಯದರ್ಶಿಯಾಗಿ ಇಡೀ ರಾಜ್ಯದ ಅಧಿಕಾರ ಶಾಹಿಯ ಚುಕ್ಕಾಣಿ ಹಿಡಿಯಲಿದ್ದಾರೆ. ವಂದಿತಾ ಅವರ ಅವಧಿ ಮುಂದಿನ ನವೆಂಬರ್‌ 2023 ರವರೆಗೆ ಇರಲಿದೆ.

By admin

Leave a Reply

Your email address will not be published. Required fields are marked *

error: Content is protected !!