ಭಾರತದ ಐಟಿ ದಿಗ್ಗಜ ಕಂಪೆನಿಯಾದ ಇನ್ಪೋಸಿಸ್ ಲಿಮಿಟೆಡ್ ಐದು ವರ್ಷಗಳ ಅವಧಿಗೆ ಸಲೀಲ್ ಪರೇಖ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿ ಮರು ನೇಮಕ ಮಾಡಲಾಗಿದೆ. ಸಲೀಲ್ ಪರೇಖ್ ಅವರು ಮಾರ್ಚ್ 2027 ರವರೆಗೆ ಇನ್ಪೋಸಿಸ್ ಸಿಇಒ ಮತ್ತು ಎಂಡಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕಂಪನಿಯ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ (NRC) ಶಿಫಾರಸುಗಳನ್ನು ಆಧರಿಸಿ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಇನ್ಫೋಸಿಸ್ ಲಿಮಿಟೆಡ್ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಸಲೀಲ್ ಪರೇಖ್ ಅವರು ಜನವರಿ 2018 ರಿಂದ ಇನ್ಫೋಸಿಸ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರ ಮರುನೇಮಕವು ಷೇರುದಾರರ ಅನುಮೋದನೆಗೆ ಒಳಪಟ್ಟಿದೆ ಎಂದು ಕಂಪನಿಯು ತಿಳಿಸಿದೆ.

ಸಲೀಲ್ ಪರೇಖ್ ಅವರು ಐಟಿ ಸೇವಾ ಉದ್ಯಮದಲ್ಲಿ ಮೂವತ್ತು ವರ್ಷಗಳ ಜಾಗತಿಕ ಅನುಭವವನ್ನು ಹೊಂದಿದ್ದಾರೆ. ಸಲೀಲ್ ಪರೇಖ್ ಈ ಹಿಂದೆ ಕ್ಯಾಪ್ಜೆಮಿನಿಯಲ್ಲಿ ಗ್ರೂಪ್ ಎಕ್ಸಿಕ್ಯೂಟಿವ್ ಬೋರ್ಡ್‌ನ ಸದಸ್ಯರಾಗಿದ್ದರು. ಅಲ್ಲಿ ಅವರು 25 ವರ್ಷಗಳ ಕಾಲ ಹಲವಾರು ನಾಯಕತ್ವ ಸ್ಥಾನಗಳನ್ನು ಹೊಂದಿದ್ದರು. ಅವರು ಅರ್ನ್ಸ್ಟ್ ಮತ್ತು ಯಂಗ್‌ನಲ್ಲಿ ಪಾಲುದಾರರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.  

ಸಲೀಲ್ ಪರೇಖ್ ಅವರ ಶೈಕ್ಷಣಿಕ ಹಿನ್ನೆಲೆಯನ್ನು ಗಮನಿಸುವುದಾದರೆ ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಆಫ್ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಬಾಂಬೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿಯನ್ನು ಹೊಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!