ನವದೆಹಲಿ: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಜಪಾನ್‌ನ ಟೋಕಿಯೊ ನಗರದಲ್ಲಿ ಮೇ 24ರಂದು ನಡೆಯುವ ಕ್ವಾಡ್‌ ರಾಷ್ಟ್ರಗಳ ನಾಯಕರ ಮೂರನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದ್ದು, ಇದೇವೇಳೆ ಅತಿ ಹೆಚ್ಚು ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಇಂಡೊ-ಪೆಸಿಫಿಕ್‌ ವಲಯದ ಅಭಿವೃದ್ಧಿ ಮತ್ತು ಪ್ರಚಲಿತ ಜಾಗತಿಕ ಬಿಕ್ಕಟ್ಟುಗಳ ಬಗ್ಗೆ ಚರ್ಚಿಸಲು ಕ್ವಾಡ್‌ ನಾಯಕರಿಗೆ ಈ ಶೃಂಗಸಭೆ ವೇದಿಕೆ ಒದಗಿಸಲಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್‌ ಬಗ್ಚಿ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಆಸ್ಟ್ರೇಲಿಯಾ ಹಾಗೂ ಜಪಾನ್‌ನ ಪ್ರಧಾನಮಂತ್ರಿಗಳ ಜತೆ ಸಭೆ ಸೇರಿದಂತೆ ಒಟ್ಟು 40 ಗಂಟೆಗಳ ಅವಧಿಯಲ್ಲಿ 23 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆಂದು ಸಚಿವಾಲಯ ತಿಳಿಸಿದೆ.

ಶೃಂಗಸಭೆ ನೇಪಥ್ಯದಲ್ಲಿ ಮೋದಿ ಅವರು ಜಪಾನ್‌ ಪ್ರಧಾನಿ ಫುಮಿಯೊ ಕಿಷಿದಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಕ್ವಾಡ್‌ ಶೃಂಗ ಎಂದರೆ ಕ್ವಾಡ್ರಿಲೇಟರಲ್‌ ಸೆಕ್ಯುರಿಟಿ ಡೈಲಾಗ್‌. ಚತುರ್ಭುಜ ಶೃಂಗ ಎಂದು ಕರೆಯಲಾಗುತ್ತದೆ. ಆಸ್ಪ್ರೇಲಿಯಾ, ಭಾರತ, ಜಪಾನ್‌ ಮತ್ತು ಅಮೆರಿಕ ಎಂಬ ನಾಲ್ಕು ಪ್ರಜಾಪ್ರಭುತ್ವ ರಾಷ್ಟ್ರಗಳ ಗುಂಪು ಇದಾಗಿದೆ. ಕ್ವಾಡ್‌ ಕಲ್ಪನೆಯನ್ನು 2007ರಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ಶಿಂಜೊ ಅಬೆ ಅವರು ಪ್ರಸ್ತಾಪಿಸಿದರು.

By admin

Leave a Reply

Your email address will not be published. Required fields are marked *

error: Content is protected !!