ಮಂಗಳೂರು, ಆ. 18: ರೈತ, ದಲಿತ, ಕಾರ್ಮಿಕ, ಜನಪರ ಚಳವಳಿಗಳ ಒಕ್ಕೂಟ ಬಂಟ್ವಾಳ ಇದರ ವತಿಯಿಂದ ಇಂದು ಸಂಜೆ ಬಂಟ್ವಾಳ ಆಡಳಿತ ಸೌಧದ ಎದುರು ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ, ಮಹಿಳೆಯ ಬೆತ್ತಲೆ ಮೆರವಣಿಗೆಯನ್ನೂ ಸೇರಿದಂತೆ, ಇಲ್ಲಿನ ಗುಂಪು ಗಲಭೆ ಹಾಗೂ ಹತ್ಯಾಕಾಂಡವನ್ನು ಖಂಡಿಸಿ ಮತ್ತು ಅದನ್ನು ನಿಯಂತ್ರಿಸಲು ವಿಫಲವಾದ ಅಲ್ಲಿನ ರಾಜ್ಯ ಸರಕಾರವನ್ನು ವಜಾ ಗೊಳಿಸಲು ಆಗ್ರಹಿಸಿ ಮತ್ತು ಹನ್ನೆರಡು ವರ್ಷಗಳ ಹಿಂದೆ, ಧರ್ಮಸ್ಥಳದ ಸೌಜನ್ಯ ಎಂಬ ಅಮಾಯಕ ಬಾಲಕಿಯನ್ನು ಅತ್ಯಾಚಾರ ಎಸಗಿ ಹತ್ಯೆ ನಡೆಸಿದ ಪ್ರಕರಣದ ನೈಜ ಅಪರಾಧಿಗಳನ್ನು ಪತ್ತೆ ಮಾಡುವಲ್ಲಿನ ವಿಫಲತೆಯನ್ನು ಖಂಡಿಸಿ, ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣವನ್ನು SIT ತನಿಖೆಗೆ ವಹಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ಧೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ರವಿಕಿರಣ್ ಪುಣಚ ಮಾತನಾಡಿ ಇಂದು ದೇಶದಲ್ಲಿ ಮನುಷ್ಯ ಮನುಷ್ಯನನ್ನು ದ್ವೇಷಿಸುವ ಕೃತ್ಯಗಳು ಅಧಿಕವಾಗುತ್ತಿದ್ದು, ಪ್ಯಾಶಿಸ್ಟರ ಕೈಯಲ್ಲಿ ಆಡಳಿತ ಇರುವ ಕಾರಣ ಇಂದು‌ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದು ಇದಕ್ಕೆ ಪ್ರಧಾನಿ ನರೇಂದ್ರ ‌ಮೋದಿಯವರು ಮೌನವಾಗಿರುವುದೇಕೆ? ಎಂದು ಪ್ರಶ್ನಿಸಿದರು, ಜನಾಂಗೀಯ ಹಿಂಸೆಯನ್ನು ನಿಲ್ಲಿಸಲು ಕೇಂದ್ರ ಸರಕಾರ ಕ್ರಮಕೈಗೊಳ್ಳಬೇಕು ಎಂದರು. ಹಾಗೆಯೇ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಬಲಾಢ್ಯರು ನಿಂತಿದ್ದು ಕೂಡಲೇ ಸರಕಾರ ಪ್ರಕರಣದ ಮರುತನಿಖೆ ಮಾಡಲು‌ ಆದೇಶಿಸಬೇಕು ಎಂದರು.
ಎ.ಐ.ಸಿ.ಸಿ.ಟಿ.ಯು. ಜಿಲ್ಲಾ ಅಧ್ಯಕ್ಷರಾದ ರಾಮಣ್ಣ ವಿಟ್ಲ ಮಾತನಾಡಿ ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣದ ಮುಂಚೆ ಕೂಡಾ ಇದೇ ರೀತಿಯ ಪ್ರಕರಣಗಳು ನಡೆದಿದ್ದು, ಪದ್ಮಲತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿನ, ಆರೋಪಿಗಳು ಇಂದಿನವರೆಗೂ ಪತ್ತೆಯಾಗಿಲ್ಲ, ವೇದವಲ್ಲಿ ಕೊಲೆ ಪ್ರಕರಣದಲ್ಲಿ ಕೂಡಾ ಆರೋಪಿಗಳ ಪತ್ತೆಯಾಗಿಲ್ಲ. ಇದರ ಹಿಂದೆ ಬಲಾಢ್ಯ ಶಕ್ತಿಗಳು‌ ಇದ್ದು , ಆ ಕ್ಷುದ್ರಶಕ್ತಿಗಳ ರಕ್ಷಣೆಗೆ ಇಲ್ಲಿನ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ನಿಂತಿವೆಯೆಂದು ಆರೋಪಿಸಿದರು. ಅಲ್ಲದೆ,
ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್,ದಲಿತ ಸೇವಾ ಸಮಿತಿಯ ಸ್ಥಾಪಕಾದ್ಯಕ್ಷರಾಗಿರುವ ಬಿ.ಕೆ.ಸೇಸಪ್ಪ ಬೆದ್ರಕಾಡು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ವಕ್ತಾರರಾದ ಅಬ್ದುಲ್ ಖಾದರ್ ಕುಕ್ಕಾಜೆ, ರಾಜ್ಯ ರೈತ ಸಂಘದ ಖಾಯಂ ಆಹ್ವಾನಿತರಿರುವ ಸನ್ನಿ ಡಿ.ಸೋಜ ಮುಂತಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ, ಡಿ.ಕೆ.ಶಾಹುಲ್ ಹಮೀದ್ ಕನ್ಯಾನ, ರಾಜ್ಯ ರೈತ ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷರಾದ ಆದಿತ್ಯ ನಾರಾಯಣ್ ರಾವ್ ಕೊಲ್ಲಾಜೆ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಕೋರ್ಯ, ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಮುಖಂಡರಾದ ದಿನೇಶ ಆಚಾರಿ ಮಾಣಿ, ಲಿಯಾಕತ್ ಖಾನ್, ಇಬ್ರಾಹಿಂ ಮೈಂದಾಳ, ದಲಿತ ಮುಖಂಡರಾದ ಬಿ.ಟಿ.ಕುಮಾರ್,
ವಿವಿಧ ಸಂಘಟನೆಗಳ ಮುಖಂಡರಾದ ದಿವಾಕರ ಪೈ, ಲೋಲಜಾಕ್ಷ ಭೂತಕಲ್ಲು, ಚಂದ್ರಶೇಖರ್.ಯು, ದಲಿತ ಸೇವಾ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯವರಾದ ವಿಮಲ ಸೀಗೆಬಲ್ಲೆ, ಕೋಶಾಧಿಕಾರಿ ಶಾಲಿನಿ ಸೀಗೆಬಲ್ಲೆ, ಪ್ರಸಾದ್ ಬೊಳ್ಮಾರ್ ಮುಂತಾದವರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

By admin

Leave a Reply

Your email address will not be published. Required fields are marked *

error: Content is protected !!