ಬೆಂಗಳೂರು : ರಾಜ್ಯದಲ್ಲಿ ಈಡಿಗ ಸಮುದಾಯದಲ್ಲಿ ವರನಟ ಡಾ.ರಾಜ್‌ಕುಮಾರ್‌ ಕುಟುಂಬದಲ್ಲಿ ಪವರ್‌ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಹಾಗೂ ಸ್ಪಂದನಾ ವಿಜಯ್‌ ರಾಘವೇಂದ್ರ ಚಿಕ್ಕ ವಯಸ್ಸಿಗೆ ಮೃತಪಟ್ಟಿದ್ದಾರೆ. ಈ ಅಕಾಲ ಮೃತ್ಯುವಿಗೆ ಸಂಬಂಧಿಸಿದಂತೆ ಕೇರಳ ಉನ್ನತ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಳವನ್ನು ಕೇಳುತ್ತೇವೆ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ ಅವರು, ಅಪ್ಪು ಮತ್ತು ಸ್ಪಂದನ ಸಣ್ಣ ವಯಸ್ಸಿನಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಂದೆ ರಾಜ್‌ ಕುಮಾರ್‌ ಕುಟುಂಬದಲ್ಲಿ ಪುನೀತ್‌ ರಾಜ್‌ಕುಮಾರ್‌ ಹೃದಯ ಸಂಬಂಧಿಸಿದ ಕಾಯಿಲೆಯಿಂದ ಮೃತಪಟ್ಟಿದ್ದರು. ಆದರೆ, ಈಗ ಮತ್ತದೇ ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಸಣ್ಣ ವಯಸ್ಸಿನಲ್ಲಿ ಸ್ಪಂದನಾ ಮೃತಪಟ್ಟಿದ್ದಾರೆ. ಇಂತಹ ಅಕಾಲ ಮೃತ್ಯು ಸಂಭವಿಸುತ್ತಿರುವುದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ. 

ಆದ್ದರಿಂದ ಈಡಿಗ ಸಮುದಾಯದ ಕೇರಳದ ತಂತ್ರಿಗಳ ಕಡೆಯಿಂದ ಅಷ್ಟಮಂಗಳ ಪ್ರಶ್ನೆ ಹಾಕಿ ಕೇಳಬೇಕು. ನಾನು ಈ ಬಗ್ಗೆ ಶಿವರಾಜ್ ಕುಮಾರ್ ಅವರ ಜೊತೆಗೆ ಮಾತಾಡಿದ್ದೇನೆ. ಮನೆಯಲ್ಲಿ ಸ್ಪಂದನಾ ಸಾವಿನ ನಂತರ 11 ದಿನಗಳ ಕಾಲ ವಿವಿಧ ವಿಧಿ ವಿಧಾನಗಳನ್ನು ಮಾಡಲಾಗುತ್ತದೆ. ಈ ಎಲ್ಲ ಕ್ರಿಯೆಗಳು ಪೂರ್ಣಗೊಂಡ ನಂತರ 41 ದಿನಗಳು ಪೂರೈಸಿದಾಗ ಕೇರಳದ ಉನ್ನತ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಳ ಪ್ರಶ್ನೆ ಕೇಳುತ್ತೇವೆ. ರಾಜ್ ಕುಟುಂಬಕ್ಕೆ ‌ಯಾಕೆ ಈ ರೀತಿಯಲ್ಲಿ ಅಕಾಲ ಮೃತ್ಯು ‌ಸಂಭವಿಸುತ್ತಿದೆ ಎಂದು ತಿಳಿದುಕೊಳ್ಳಲು ಮುಂದಾಗುತ್ತೇವೆ. ಕೇರಳ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಳ ಪ್ರಶ್ನೆ ಕೇಳುವ ಮುಂದಾಳತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ನಾವು ಮೃತದೇಹವನ್ನು ಸುಡುವಂತಿಲ್ಲ: ಈಡಿಗ ಸಮುದಾಯದಲ್ಲಿ ಸಾವು ಸಂಭವಿಸಿದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ನಾರಾಯಣ ಗುರುಗಳು ಹಲವು ವಿಧಿ ವಿಧಾನಗಳನ್ನು ತಿಳಿಸಿದ್ದಾರೆ. ಅದೇ ರೀತಿಯಾಗಿ ಮುತ್ತೈದೆ ಸಾವಿನ ಭಾಗ್ಯ ಕಂಡ ಸ್ಪಂದನಾಗೆ ಬೆಳಿಗ್ಗೆ 9 ಗಂಟೆಗೆಯೊಳಗೆ ಮನೆಯಲ್ಲಿಯೇ ಎಲ್ಲ ಶಾಸ್ತ್ರವನ್ನು ಮಾಡಿ ಮುಗಿಸಲಾಗಿತ್ತು. ಮಗ ಶೌರ್ಯ ಮತ್ತು ಕುಟುಂಬದ ಸದಸ್ಯರ ‌ಮೂಲಕ ವಿಧಿ ವಿಧಾನವನ್ನು ಮನೆ ಹತ್ತಿರ ಮಾಡಿಸಿದ್ದೇವೆ. ನಾವು ಮೃತದೇಹವನ್ನು ಹೂಳುವಂತಿಲ್ಲ ಸುಡಬೇಕೆಂದು ನಾರಾಯಣ ಗುರುಗಳು ಸೂಚನೆ ನೀಡಿದ್ದಾರೆ. ಅದರಂತೆ ಸ್ಪಂದನಾ ಮೃತದೇಹವನ್ನು ಸುಡಲಾಗಿದೆ.  ಮನೆಯಲ್ಲಿ 11 ದಿನಗಳ ಕಾಲ ಪೂಜೆಗಳು ನಡೆಯುತ್ತದೆ ಎಂದು ಮಾಹಿತಿ ನೀಡಿದರು. 

ಕೊನೆಯದಾಗಿ ತಾಳಿ ಕಟ್ಟಿದ ವಿಜಯ್‌ ರಾಘವೇಂದ್ರ: ನಟ ವಿಜಯ್‌ ರಾಘವೇಂದ್ರನ ಪತ್ನಿ ಸ್ಪಂದನಾ ಕೂಡ ಮುತ್ತೈದೆಯಾಗಿ ಮೃತಪಟ್ಟಿದ್ದರಿಂದ ಈಡಿಗ ಸಮುದಾಯದ ಸಂಪ್ರದಾಯದಂತೆ ಸ್ಪಂದನಾಳ ಮೃತದೇಹಕ್ಕೆ ಕೊನೆಯದಾಗಿ ತಾಳಿ ಕಟ್ಟಿಸಿ ಮುತ್ತೈದೆಯರಿಂದ ಆರತಿ ಮಾಡಿಸಲಾಯಿತು. ನಂತರ, ಕೊನೆಯದಾಗಿ ಎಲ್ಲರೂ ಮತ್ತೈದೆ ಸ್ಪಂದನಾಳ ಮುಖವನ್ನು ನೋಡಿದ ನಂತರ, ಅವರ ಮೈಮೇಲಿದ್ದ ಎಲ್ಲ ಆಭರಣಗಳನ್ನೂ ಬಿಚ್ಚಿಕೊಳ್ಳಲಾಯಿತು. ನಂತರ, ಅಂತ್ಯಕ್ರಿಯೆಯ ಕೊನೆಯ ಸಂಸ್ಕಾರ ನೆರವೇರಿಸಲಾಯಿತು. ನಟ ವಿಜಯ್‌ ರಾಘವೇಂದ್ರನ ಪತ್ನಿ ಸ್ಪಂದನಾ ಮುತ್ತೈದೆಯಾಗಿ ಸಾವನ್ನಪ್ಪಿದ್ದಾಳೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಕೊನೆಯದಾಗಿ ಸ್ಪಂದನಾ ಪತಿ ವಿಜಯ್‌ ರಾಘವೇಂದ್ರ ತಾಳಿಯನ್ನು ಕಟ್ಟಿ ಮುತ್ತೈದೆ ಭಾಗ್ಯವನ್ನು ನೀಡಿ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದರು.

By admin

Leave a Reply

Your email address will not be published. Required fields are marked *

error: Content is protected !!