ಮೈಸೂರು: ಯುವ ಬ್ರಿಗೇಡ್ ಕಾರ್ಯಕರ್ತ (Yuva Brigade) ವೇಣುಗೋಪಾಲ ನಾಯಕ್ (Venugopal Naik) ಹತ್ಯೆ ಪೂರ್ವ ನಿಯೋಜಿತ ಎಂದು ಟಿ. ನರಸೀಪುರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆರೋಪಿಸಿದ್ದಾರೆ. ಸಿಟಿ ರವಿ ನೇತೃತ್ವದ ಬಿಜೆಪಿ ಸತ್ಯಶೋಧನಾ ತಂಡ ವೇಣುಗೋಪಾಲ್ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಮೃತನ ಪತ್ನಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿತು. ವೇಣುಗೋಪಾಲ್ ಪತ್ನಿಗೆ ಸಿಟಿ ರವಿ 5 ಲಕ್ಷ ರೂಪಾಯಿ ಚೆಕ್ ನೀಡಿದರು. ನಂತರ ಮಾತನಾಡಿದ ಅವರು, ಇದೊಂದು ಪೂರ್ವನಿಯೋಜಿತ ಹತ್ಯೆ. 30 ಕಡೆ ಇರಿದಿದ್ದಾರೆ, ಶಸ್ತ್ರಾಸ್ತ್ರ ಬಳಸಿ ಕೊಲೆ ಮಾಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಇದುವರೆಗೂ ರಾಜ್ಯದ 16-17 ಕಡೆ ಈ ರೀತಿ ಘಟನೆಗಳು ನಡೆದಿವೆ ಎಂದು ದೂರಿದರು.

ವೇಣುಗೋಪಾಲ ನಾಯಕ್ ಹನುಮ ಜಯಂತಿ ನೇತೃತ್ವವಹಿಸಿದ್ದ ಕಾರಣ ಈ ಕೊಲೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಒಂದು ವರ್ಗದ ಜನ ಯುದ್ಧೋತ್ಸಹದಲ್ಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅರಾಜಕತೆ ಸ್ಥಿತಿ ಸೃಷ್ಟಿಯಾಗಿದೆ. ಹಿಂದೂ ಸಂಘಟನೆಗಳ ಚಟುವಟಿಕೆ ಹತ್ತಿಕುವ ಕೆಲಸವಾಗುತ್ತಿದೆ. ಸಂಘಟನಗಳ ಮುಖಂಡರಿಗೆ ಭಯ ಹುಟ್ಟಿಸುವ ಕೆಲಸ ನಡೆದಿದೆ. ಈ ಕ್ಷೇತ್ರದ ಶಾಸಕ ಡಾ. ಮಹದೇವಪ್ಪ ಕಡೆಯಿಂದ ಈ ಕುಟುಂಬಕ್ಕೆ ಒಂದು ಸಾಂತ್ವನದ ನುಡಿ ಕೂಡ ಬಂದಿಲ್ಲ. ಮುಖ್ಯಮಂತ್ರಿ ಕಡೆಯಿಂದಲ್ಲೂ ಸಾಂತ್ವನ ಬಂದಿಲ್ಲ. ಮುಖ್ಯಮಂತ್ರಿಗಳು ಈ ಹತ್ಯೆ ಬಗ್ಗೆ ತುಟಿ ಬಿಚ್ಚಿಲ್ಲ. ಸಿದ್ದರಾಮಯ್ಯ ಅವರಿಗೆ ಕೇಸರಿ ಕಂಡರೆ ಆಗದ ಮಾನಸಿಕತೆ ಇದೆ. ವೇಣುಗೋಪಾಲ ನಾಯಕ, ಕೇಸರಿಯ ನೇತೃತ್ವವಹಿಸಿ ಕೊಂಡವರಾದ ಕಾರಣ ಸಾಂತ್ವನ ಹೇಳಿಲ್ಲ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಜಿಹಾದಿ ಮಾನಸಿಕತೆಯಲ್ಲಿ ಇರುವವರು ಉನ್ಮಾದ ಸ್ಥಿತಿ ತಲುಪಿದ್ದಾರೆ. ಕೊಲೆ ಆರೋಪಿಗಳು ಬಲಾಢ್ಯರ ಜೊತೆ ಸಂಪರ್ಕ ಹೊಂದಿದ್ದಾರೆ. ಕೇಸ್ ದುರ್ಬಲಗೊಳಿಸುವ ಶಕ್ತಿಯೂ ಆರೋಪಿಗಳಿಗೆ ಇದೆ. ಇಂತಹ ಹತ್ಯೆ ಆದಾಗ ಪೊಲೀಸರ ಮೂಲಕ ಸುಳ್ಳು ಸುದ್ದಿಯನ್ನು ಹರಡಿಸುವ ಕೆಲಸ ಆಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜೈನ ಮುನಿಗಳ ಹತ್ಯೆ ವಿಚಾರದಲ್ಲಿ, ಅವರು ಬಡ್ಡಿ ವ್ಯಾವಹಾರ ಮಾಡುತ್ತಿದ್ದರು ಎಂದು ಪೊಲೀಸರು ಸುಳ್ಳು ಸುದ್ದಿ ಸೃಷ್ಟಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಮಾಜಿ ಸಚಿವರಾದ ಡಾ. ಸಿಎನ್ ಅಶ್ವತ್ಥನಾರಾಯಣ, ಎನ್ ಮಹೇಶ್, ಶಾಸಕ ಶ್ರೀವತ್ಸ, ಮಾಜಿ ಎಂಎಲ್ಸಿ ಮಲ್ಲಿಕಾರ್ಜುನಪ್ಪ ಬಿಜೆಪಿ ತಂಡದ ಜತೆಗಿದ್ದರು. ಸಂಸದ ಪ್ರತಾಪ್ ಸಿಂಹ ಹಾಜರಿರಲಿಲ್ಲ.
ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರಕ್ಕೆ ಅಶ್ವತ್ಥನಾರಾಯಣ ಆಗ್ರಹ
ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಬಿಜೆಪಿ ನಾಯಕ ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ. ಸರ್ಕಾರದಲ್ಲಿ ಪರಿಹಾರ ನೀಡಲು ಬೇಕಾದಷ್ಟು ದಾರಿಗಳು ಇವೆ. ಸರ್ಕಾರದ ಪರಿಹಾರ ಕೊಡಬೇಕು. ವೇಣುಗೋಪಾಲ್ ಪತ್ನಿಗೆ ಉದ್ಯೋಗ ಕೊಡಬೇಕು. ಇಂತಹ ಘಟನೆ ಆಗಬಾರದಿತ್ತು. ಸಾವಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಈ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!