ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿಗಳ ಆಸ್ತಿ ಜಪ್ತಿ ಮಾಡುವುದಾಗಿ ರಾಷ್ಟ್ರೀಯ ತನಿಖಾ ದಳ(NIA) ಉದ್ಘೋಷಣೆ ಮಾಡಿದ ಬೆನ್ನಲ್ಲೇ, ಆರೋಪಿಗಳು ಅರಬ್ ದೇಶಗಳಲ್ಲಿ ಆಶ್ರಯ ಪಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬಿಜೆಪಿ ಯುವ ಮೋರ್ಚಾದ ಮುಖಂಡನ ಪ್ರಮುಖ ಕೊಲೆ ಆರೋಪಿಗಳಾದ ಈ ಇಬ್ಬರ ಬಂಧನಕ್ಕೆ ಎನ್ಐಎ ಕರ್ನಾಟಕ ಮತ್ತು ಕೇರಳಗಳಲ್ಲಿ ಅವಿರತ ಕಾರ್ಯಾಚರಣೆ ನಡೆಸುತ್ತಿದ್ದರೆ, ಆರೋಪಿಗಳು ಗಲ್ಫ್ ರಾಷ್ಟ್ರಗಳಲ್ಲಿ ಹಾಯಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಉಮರ್ ಫಾರೂಕ್ ಮತ್ತು ಮುಸ್ತಾಫಾ ಪೈಚಾರ್ ಅವರು ಜೂನ್ 30ರೊಳಗೆ ಶರಣಾಗದೇ ಹೋದಲ್ಲಿ ಕಲ್ಲುಮುಟ್ಲುವಿನಲ್ಲಿರುವ ಅವರ ಆಸ್ತಿಯನ್ನು ಜಪ್ತಿ ಮಾಡುವಂತೆ ಎನ್ ಐಎ ವಿಶೇಷ ಕೋರ್ಟ್ ಅಧಿಕಾರಿಗಳಿಗೆ ಆದೇಶ ನೀಡಿತ್ತು.

ಸುಳಿವು ನೀಡಿದವರಿಗೆ 14 ಲಕ್ಷ ಇನಾಮು

ಇನ್ನಿಬ್ಬರು ಪ್ರಮುಖ ಆರೋಪಿಗಳಾದ ಅಬೂಬಕ್ಕರ್ ಸಿದ್ದಿಕ್ ಮತ್ತು ತುಫೈಲ್ ಎಂಎಚ್ ಅವರನ್ನು ಸಹ ಬಂಧಿಸಲು ಎನ್ಐಎ ಬಲೆ ಬೀಸಿದೆ. ಈ ನಾಲ್ವರ ಬಗ್ಗೆ ಸುಳಿವು ನೀಡಿದವರಿಗೆ ಎನ್ಐಎ ಒಟ್ಟಾರೆ 14 ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದೆ. ಅದರಲ್ಲಿ ಮೊಹಮ್ಮದ್ ಮುಸ್ತಾಫಾ ಮತ್ತು ತುಫೈಲ್ ಎಂಎಚ್ ಅವರ ಬಗ್ಗೆ ನೀಡಿದ ಸುಳಿವಿಗೆ ತಲಾ 5 ಲಕ್ಷ ರೂಪಾಯಿ, ಉಮರ್ ಫಾರೂಕ್ ಮತ್ತು ಅಬೂಬಕರ್ ಸಿದ್ದಿಕ್ ಬಗ್ಗೆ ನೀಡಿದ ಸುಳಿವಿಗೆ ತಲಾ 2 ಲಕ್ಷ ರೂಪಾಯಿ ಎಂದು ನಿಗದಿಪಡಿಸಿದೆ.

ಮೂಲಗಳ ಪ್ರಕಾರ ತುಫೈಲ್ ಕೊಡಗು ಮತ್ತು ಸುತ್ತಮುತ್ತ ಕೋಮುಗಲಭೆ ನಡೆಸಿದ ಪಿಎಫ್ಐ ತಂಡದ ಭಾಗವಾಗಿದ್ದರು. ಕೊಲೆ ಪ್ರಕರಣವನ್ನು ಎನ್ ಐಎಗೆ ಹಸ್ತಾಂತರಿಸಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡು ಅರಬ್ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಉಗ್ರಗಾಮಿ ಸಂಘಟನೆಗಳ ಸದಸ್ಯರು ಮತ್ತು ಸಹಾನುಭೂತಿ ಹೊಂದಿರುವ ವ್ಯಕ್ತಿಗಳ ಸಹಾಯ ಪಡೆದು ಅವರು ನೇಪಾಳದ ಮೂಲಕ ಅರಬ್ ರಾಷ್ಟ್ರಗಳಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ನೇಪಾಳಕ್ಕೂ ತೆರಳಿದ್ದ ಎನ್ಐಎ ಅಧಿಕಾರಿಗಳು

ಆರೋಪಿಗಳ ಜಾಡು ಹಿಡಿದು ಎನ್ಐಎ ಅಧಿಕಾರಿಗಳ ತಂಡವು ನೇಪಾಳಕ್ಕೂ ತೆರಳಿತ್ತು. ಆದರೆ ಅವರು ಅಲ್ಲಿಗೆ ತಲುಪುವ ಮೊದಲೇ ಆರೋಪಿಗಳು ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಎನ್ಐಎ ತಂಡ ಖಾಲಿ ಕೈಯ್ಯಲ್ಲಿ ಮರಳಬೇಕಾಯಿತು.

ಇಬ್ಬರು ಪ್ರಮುಖ ಆರೋಪಿಗಳು ಜೂನ್ 30 ಶುಕ್ರವಾರದೊಳಗೆ ಶರಣಾಗದಿದ್ದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಗುರುವಾರವಷ್ಟೇ ಅಧಿಕಾರಿಗಳು ಸುಳ್ಯದಲ್ಲಿ ಧ್ವನಿವರ್ಧಕದ ಮೂಲದ ಉದ್ಘೋಷಣೆ ಮಾಡಿದ್ದರು.ಜೊತೆಗೆ ನಗದು ಬಹುಮಾನವನ್ನೂ ಘೋಷಿಸಿದ್ದರು. ಆದರೆ ಅದರ ಬೆನ್ನಲ್ಲೇ ಈ ಬೆಳವಣಿಗೆ ತಿಳಿದು ಬಂದಿದೆ. ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆಯಾದ ಜುಲೈ 26ರಿಂದಲೂ ಈ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ.

ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ನ್ಯಾಯಾಲಯಕ್ಕೆ ತನಿಖಾ ತಂಡ ಪುರಾವೆಗಳನ್ನು ಸಲ್ಲಿಸಿ ಕಠಿಣ ಕ್ರಮ ಕೈಗೊಳ್ಳಲು ಒಪ್ಪಿಗೆಯನ್ನೂ ಪಡೆದಿತ್ತು. ಸುಳ್ಯದಲ್ಲಿರುವ ಅವರ ಮನೆಗಳಿಗೆ ಆಸ್ತಿ ವಶಪಡಿಸಿಕೊಳ್ಳಿುವ ಬಗ್ಗೆ ಎನ್ಐಎ ಅಧಿಕಾರಿಗಳು ನೋಟಿಸ್ ಗಳನ್ನು ಸಹ ಹಾಕಿದ್ದರು.

By admin

Leave a Reply

Your email address will not be published. Required fields are marked *

error: Content is protected !!