ವಿಟ್ಲ, ಮಾ.30: ರಾಷ್ಟ್ರಪತಿಯ ಜೊತೆ ಮಾ.31ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸ್ವ-ಸಹಾಯ ಗುಂಪಿನ ಸದಸ್ಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಟ್ಲದ ಮೂವರು ಮಹಿಳೆಯರು ಆಯ್ಕೆಯಾಗಿದ್ದಾರೆ.

ಅಳಿಕೆ ಅನುಗ್ರಹ ಒಕ್ಕೂಟದ ವಾರಿಜಾ ಮತ್ತು ಅಮಿತಾ ಹಾಗೂ ಕೊಳ್ನಾಡು ನೇತ್ರಾವತಿ ಸಂಜೀವಿನಿ ಒಕ್ಕೂಟದ ಇಂದ್ರಾವತಿ ರಾಷ್ಟ್ರಪತಿಯೊಂದಿಗೆ ಸಂವಾದಕ್ಕೆ ಆಯ್ಕೆಯಾಗಿರುವವರು.

ರಾಷ್ಟ್ರಪತಿಯವರು ಬುಡಕಟ್ಟು ಜನಾಂಗದ ಸ್ವ-ಸಹಾಯ ಗುಂಪಿನ ಸದಸ್ಯರನ್ನು ಭೇಟಿಯಾಗುವ ಸಲುವಾಗಿ ಹೊಸದಿಲ್ಲಿಯ ರಾಷ್ಟ್ರಪತಿ ಭವನದ ಅಮೃತ ಉದ್ಯಾನವನಕ್ಕೆ ದೇಶದ ಎಲ್ಲೆಡೆಯಿಂದ ಬುಡಕಟ್ಟು ಜನಾಂಗದ ಮಹಿಳೆಯರನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕದಿಂದ 30 ಮಹಿಳೆಯರು ಆಯ್ಕೆಯಾಗಿದ್ದಾರೆ. ಇವರಲ್ಲಿ ದ.ಕ. ಜಿಲ್ಲೆಯಿಂದ ಆಯ್ಕೆಯಾಗಿರುವ ಮೂವರು ಕೂಡಾ ಬಂಟ್ವಾಳ ತಾಲೂಕಿನವರು ಎಂಬುದು ವಿಶೇಷ.

ದಿಲ್ಲಿ ಭೇಟಿಯ ಕುರಿತು ತೀವ್ರ ಸಂತೋಷ ವ್ಯಕ್ತಪಡಿಸಿರುವ ಮೂವರು ಮಹಿಳೆಯರು, ಇದು ನಮ್ಮ ಬದುಕಿನ ಸೌಭಾಗ್ಯ ಎಂದು ಸಂತಸ ಹಂಚಿಕೊಂಡಿದ್ದಾರೆ.

ಈ ಮೂವರು ಬೆಂಗಳೂರಿಗೆ ರೈಲಿನಲ್ಲಿ, ಅಲ್ಲಿಂದ ಹೊಸದಿಲ್ಲಿಗೆ ವಿಮಾನದಲ್ಲಿ ಪ್ರಯಾಯಣಿಸಲಿದ್ದಾರೆ.ಇವರು ಈಗಾಗಲೇ ದಿಲ್ಲಿಯತ್ತ ಪಯಣ ಆರಂಭಿಸಿದ್ದಾರೆ.

ವಾರಿಜಾ:

ಇವರು ಅಳಿಕೆಯ ಅನುಗ್ರಹ ಸಂಜೀವಿನಿ ಒಕ್ಕೂಟದಲ್ಲಿ ಕಳೆದ ಮೂರು ವರ್ಷಗಳಿಂದ ಎಂಬಿಕೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಒಕ್ಕೂಟದಿಂದ ಸ್ವ ಉದ್ಯೋಗಕ್ಕೆ ಪ್ರೇರಣೆ ಪಡೆದವರು. ಕೃಷಿ ಸಹಿತ ಮಲ್ಲಿಗೆ ಕೃಷಿಯಲ್ಲೂ ತೊಡಗಿಸಿಕೊಂಡಿರುವ ಇವರು ಆಡು ಸಾಕಣೆ, ಕೋಳಿ ಸಾಕಣೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಅಮಿತಾ

ಕನ್ಯಾನ ಕೆಪಿಎಸ್ ವಿದ್ಯಾಸಂಸ್ಥೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಇವರು ಅಣಬೆ ಕೃಷಿಯ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಕುಟುಂಬವು ಮಲ್ಲಿಗೆ ಕೃಷಿ, ಹೈನುಗಾರಿಕೆಯಲ್ಲೂ ಮುಂದಿದೆ.

ಇಂದ್ರಾವತಿ

ಕೊಳ್ನಾಡು ನೇತ್ರಾವತಿ ಒಕ್ಕೂಟದಲ್ಲಿ ಕಳೆದ 20 ವರ್ಷಗಳಿಂದ ತೊಡಗಿಸಿಕೊಂಡಿರುವ ಇವರು ಹಪ್ಪಳ, ಸಂಡಿಗೆ ತಯಾರಿಸಿ ಮಾರಾಟ ಮಾಡುವ ಜೊತೆಗೆ ಟೈಲರಿಂಗ್ ವೃತ್ತಿಯನ್ನೂ ನೆಚ್ಚಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!