ಮಂಗಳೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯ ಪ್ರಮುಖ ಕಲೆ ಯಕ್ಷಗಾನ, ಆರಾಧನೆ ಕೋಲ, ನೇಮ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆ, ಕಾರ್ಯಕ್ರಮಗಳಿಗೆ ನಿರ್ಬಂಧ ಇರುವುದಿಲ್ಲ. ಆದರೆ, ಈ ಕಾರ್ಯಕ್ರಮಗಳಲ್ಲಿ ರಾಜಕೀಯ ಮುಖಂಡರು ಭಾಗವಹಿಸುವುದು, ಕಾರ್ಯಕರ್ತರಿಂದ ಪ್ರಚಾರ ನಡೆದು ದುರುಪಯೋಗ, ಮತದಾರರ ಓಲೈಕೆ ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಎಚ್ಚರಿಕೆ ನೀಡಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅವಧಿಲ್ಲಿ ಯಾವುದೇ ಧರ್ಮಗಳ ಧಾರ್ಮಿಕ ಆಚರಣೆಗಳಿಗೂ ನೀತಿ ಸಂಹಿತೆ ಅನ್ವಯವಾಗದು. ಕಾರ್ಯಕ್ರಮಗಳ ಬಗ್ಗೆ ಬ್ಯಾನರ್, ಬಂಟಿಗ್ಸ್ ಹಾಕಬೇಕಾದರೆ ಸ್ಥಳೀಯ ಚುನಾವಣಾಧಿಕಾರಿ ಅನುಮತಿ ಪಡೆಯಬೇಕಾಗುತ್ತದೆ ಎಂದರು.

ಇದೇ ವೇಳೆ ರಾಜಕೀಯ ಪಕ್ಷಗಳು ಚಮ್ಮ ಚುನಾವಣಾ ಪ್ರಚಾರಕ್ಕಾಗಿ ಸ್ಥಳ, ವೇದಿಕೆ ಅಥವಾ ತಾರಾ ಪ್ರಚಾರಕರನ್ನು ಕರೆಸಲು ಬಳಸುವ ಹೆಲಿಪ್ಯಾಡ್‌ಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ನೀಡಲಾಗಿದೆ. ಪಕ್ಷಗಳು ಈ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಿ ಸೂಕ್ತ ಅನುಮತಿ ಪಡೆಯಬೇಕಾಗುತ್ತದೆ. ‘ಸುವಿಧಾ’ ಆಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮದುವೆ ಇನ್ನಿತರ ಸಮಾರಂಭಗಳನ್ನು ನಡೆಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಬೇಕು ಎಂದರು. ದೂರು ನೀಡಲು ಸಿ- ವಿಜಿಲ್ ಮೊಬೈಲ್ ಆ್ಯಪ್: ಸಾರ್ವಜನಿಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ದೂರುಗಳನ್ನು ಸಲ್ಲಿಸಲು ಸಿ- ವಿಜಿಲ್ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಈ ಆಪ್ ಮೂಲಕ ಜಿಲ್ಲೆಯ ಚುನಾವಣೆಗೆ ಸಂಬಂಧಿಸಿದ ಉಲ್ಲಂಘನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರು -ಟೋ ಹಾಗೂ ವೀಡಿಯೋ ಮೂಲಕ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್. ತಿಳಿಸಿದರು.

ಗೋಷ್ಠಿಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ, ಮಂಗಳೂರು ಪೊಲೀಸ್ ಆಯುಕ್ತ ಕುಲ್‌ದೀಪ್ ಕುಮಾರ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ಎಚ್. ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.

By admin

Leave a Reply

Your email address will not be published. Required fields are marked *

error: Content is protected !!