ಮಂಗಳೂರು, ನಗರದ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಗೊಳಪಡಿಸಿ ಹಂತ ಹಂತವಾಗಿ ಖಾಯಂಗೊಳಿಸುವಂತೆ ಆಗ್ರಹಿಸಿ ಕಸ ಸಾಗಿಸುವ ವಾಹನಗಳ ಚಾಲಕರು, ನೀರು ಸರಬರಾಜು ಸಹಾಯಕರು, ಲೋಡರ್‌ಗಳು, ಕ್ಲೀನರ್‌ಗಳು, ಹೆಲ್ಪರ್, ಒಳಚರಂಡಿ ಕಾರ್ಮಿಕರು ಫೆ.1 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ರಾಜ್ಯ ಸಂಘದ ಕರಾವಳಿ ವಿಭಾಗದ ಸಂಚಾಲಕ ಬಿ ಕೆ ಅಣ್ಣಪ್ಪ ಕರೆಕಾಡು, ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರಿದ್ದಾರೆ. ರಾಜ್ಯದ 330 ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಪೌರಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ. 1ರಿಂದ ಕುಡಿಯುವ ನೀರು ಸರಬರಾಜು ಮತ್ತು ಸ್ವಚತೆ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು. ಜಿಲ್ಲೆಯಲ್ಲಿಯೂ ಸುಮಾರು 900ಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಮಂಗಳೂರಿನಲ್ಲಿ ಜಾಥಾ ಹಾಗೂ ಧರಣಿ ನಡೆಸಲಾಗುವುದು ಎಂದರು.

ಪೌರ ಕಾರ್ಮಿಕರ ನೇರ ನೇಮಕಾತಿ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಹೊರ ಗುತ್ತಿಗೆ ನೌಕರರ ನ್ಯಾಯಬದ್ಧ ಹಕ್ಕಿಗಾಗಿ ನಾವು ಆಗ್ರಹಿಸುತ್ತೇವೆ. ಒಂದೇ ಇಲಾಖೆಯಲ್ಲಿ ಕೆಲಸ ಮಾಡುವವರ ಮಧ್ಯೆ ಒಡೆದು ಆಳುವ ನೀತಿ ಸರಿಯಲ್ಲ. ಈ ಲೋಪವನ್ನು ಸರಿಪಡಿಸಿ ಗುತ್ತಿಗೆ ನೌಕರರನ್ನು ಪೌರ ಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೆ ಒಳಪಡಿಸಿ ಹಂತ ಹಂತವಾಗಿ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು

By admin

Leave a Reply

Your email address will not be published. Required fields are marked *

error: Content is protected !!