ಪುತ್ತೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರ ಸುದ್ದಿಯೊಂದು ಹೊರ ಬಿದ್ದಿದ್ದು, ಬೆಳ್ಳಾರೆಯಲ್ಲಿ ನಡೆದ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಪಿಎಫ್‌ಐ ಸಂಚು ನಡೆಸಿ ಪ್ರವೀಣ್ ನೆಟ್ಟಾರು ಹತ್ಯೆ ನಡೆಸಿದೆ ಎಂಬ ಸ್ಪೋಟಕ ಮಾಹಿತಿ ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು ಈಗಾಗಲೇ ಸುಳ್ಯ ನಿವಾಸಿ ಶಿಹಾಬ್, ಪಾಲ್ತಾಡಿ ಅಂಕತ್ತಡ್ಕದ ರಿಯಾಝ್, ಸುಳ್ಯ ಎಲಿಮಲೆಯ ಬಶೀರ್, ಸವಣೂರಿನ ಝಾಕಿರ್, ಬೆಳ್ಳಾರೆಯ ಶಫೀಕ್, ಪಳ್ಳಮಜಲು ನಿವಾಸಿಗಳಾದ ಸದ್ದಾಂ, ಹ್ಯಾರಿಸ್, ಬೆಳ್ಳಾರೆ ಗೌರಿಹೊಳೆಯ ನೌಫಲ್, ನಾವೂರಿನ ಆಬಿದ್, ಜಟ್ಟಿಪಳ್ಳದ ಕಬೀರ್, ಬೆಳ್ಳಾರೆ ಕುನ್ನಾಗುಡ್ಡೆ ನಿವಾಸಿ ಬೆಳ್ಳಾರೆ ಗ್ರಾ.ಪಂ. ಸದಸ್ಯ ಕೆ.ಮಹಮ್ಮದ್ ಇಕ್ಬಾಲ್, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಇಸ್ಮಾಯಿಲ್ ಶಾಫಿ ಬೆಳ್ಳಾರೆ ಮತ್ತು ನಾವೂರು ಗಾಂಧಿನಗರ ನಿವಾಸಿ ಇಬ್ರಾಹಿಂ ಶಾ ಎಂಬವರನ್ನು ಬಂಧಿಸಿದ್ದಾರೆ.

ಇನ್ನು ವಿಚಾರಣೆಯಲ್ಲಿ ಮಸೂದ್ ಹತ್ಯೆ ಬಳಿಕ ಅದಕ್ಕೆ ಪ್ರತೀಕಾರವಾಗಿ ಮತ್ತೊಂದು ಕೊಲೆ ನಡೆಸಿ ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶವನ್ನು ಪಿಎಫ್‌ಐ ಹೊಂದಿದ್ದು, ಕೆಲವೇ ದಿನಗಳಲ್ಲಿ ಪಿಎಫ್‌ಐ ನಾಯಕರು ಮತ್ತು ಕಾರ್ಯಕರ್ತರು ಸಂಚು ರೂಪಿಸಿ ಪ್ರವೀಣ್ ನೆಟ್ಟಾರು ಟಾರ್ಗೆಟ್ ಮಾಡಿದ್ದರು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತನಾಗಿರುವ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಅವರ ಬಾವ ಸಾಹಿದ್ ಬೆಳ್ಳಾರೆ ಮತ್ತು ಪಿಎಫ್‌ಐ ಮುಖಂಡ ಜಾಬೀರ್ ಅರಿಯಡ್ಕರವರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಸುಳ್ಯ ತಾಲೂಕು ಬೆಳ್ಳಾರೆ ಬೂಡು ನಿವಾಸಿ ಮಹಮ್ಮದ್ ಮುಸ್ತಫಾ, ಮಡಿಕೇರಿ ನಿವಾಸಿ ತುಫೈಲ್ ಎಂ.ಎಚ್., ಸುಳ್ಯ ಕಲ್ಲನೊಟ್ಟು ನಿವಾಸಿ ಉಮ್ಮರ್ ಫಾರೂಕ್ ಹಾಗೂ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ಧೀಕ್ ಯಾನೆ ಪೈಂಟರ್ ಸಿದ್ಧೀಕ್ ಪತ್ತೆಗೆ ಲುಕೌಟ್ ನೊಟೀಸ್ ಹೊರಡಿಸಿರುವ ಎನ್‌ಐಎ ಅಧಿಕಾರಿಗಳು ಈ ನಾಲ್ವರ ಪತ್ತೆಗೆ ವಿವಿದೆಡೆ ಬಲೆ ಬೀಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!