ಮೂಡುಬಿದಿರೆ: ಬುಧವಾರ ನಡೆದ ಪಿಯುಸಿ ವಿಧ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವೃದ್ಧನೋರ್ವನನ್ನು ಪೊಲೀಸರು ಬಂಧಿಸುವ ಮೂಲಕ ಪ್ರಕರಣದ ಕುತೂಹಲಕಾರಿ ಅಂಶ ಹೊರಬಿದ್ದಿದೆ.

ಆಕೆಯ ಸಾವಿಗೆ ಲೈಂಗಿಕ ಕಿರುಕುಳವೇ ಕಾರಣ ಎನ್ನಲಾಗಿದ್ದು, ಆರೋಪಿ ಶ್ರೀಧರ ಪುರಾಣಿಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಬೈಲೂರಿನವಳಾದ ಹುಡುಗಿಯು ಮೂಡುಬಿದಿರೆಯ ಹೊರವಲಯದಲ್ಲಿರುವ ಹೌದಾಲ್‌ನಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದು ಪ.ಪೂ. ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದಳು. ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಕೆ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್‌ ನೋಟ್‌ನಲ್ಲಿ ಕಾಲೇಜಿನ ನಿವೃತ್ತ ಸಿಬ್ಬಂದಿಯ ಶ್ರೀಧರ ಪುರಾಣಿಕನ ಹೆಸರನ್ನು ಉಲ್ಲೇಖೀಸಿ, ಆತನ ಲೈಂಗಿಕ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾಳೆ.

ಈ ಹಿನ್ನೆಲೆಯಲ್ಲಿ ಆರೋಪಿ ಶ್ರೀಧರ ಪುರಾಣಿಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಘಟನೆಯ ವಿವರ
17ರಹರೆಯದ ವಿದ್ಯಾರ್ಥಿನಿ ಮಂಗಳವಾರ ಕಾಲೇಜಿಗೆ ಹಾಜರಾಗಿದ್ದು, ವಿಪರೀತ ಕಿವಿನೋವು ಇರುವುದಾಗಿ ಆಕೆ ಕಾಲೇಜಿನಲ್ಲಿ ತಿಳಿಸಿದ್ದ ಹಿನ್ನೆಲೆಯಲ್ಲಿ ಕಾಲೇಜಿನಿಂದ ಆಕೆಯ ಪೋಷಕರೊಬ್ಬರಿಗೆ ಕರೆಮಾಡಿ ಆಕೆಯನ್ನು ಕರೆದುಕೊಂಡು ಹೋಗಲು ಸೂಚಿಸಿದ್ದರೆನ್ನಲಾಗಿದೆ.

ಕರೆ ಸ್ವೀಕರಿಸಿದ ಆಕೆಯ ಪೋಷಕರೊಬ್ಬರು ಕೆಲಸದ ಒತ್ತಡದಲ್ಲಿರುವುದರಿಂದ ಆರೋಪಿ ಪುರಾಣಿಕನಿಗೆ ಆಕೆಯನ್ನು ಕಾಲೇಜಿನಿಂದ ಕರೆತರುವಂತೆ ಸೂಚಿಸಿದ್ದಾರೆ. ಸಂತ್ರಸ್ಥೆಯ ಪೋಷಕರು ಆರೋಪಿ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಕಾರಣ ಪರಿಚಯಸ್ಥ ಪುರಾಣಿಕ ಆಕೆಯನ್ನು ತನ್ನ ಕಾರಿನಲ್ಲಿ ಮನೆಯತ್ತ ಕರೆದುಕೊಂಡು ಬರುವಾಗ ಕಾರು ನಿಲ್ಲಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆನ್ನಲಾಗಿದೆ. ಇದರಿಂದ ಮನನೊಂದ ಆಕೆಯು ಬುಧವಾರ ತನ್ನ ವಾಸ್ತವ್ಯದ ಮನೆಯ ಸಮೀಪದ ಹಾಡಿಯ ಮರವೊಂದಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಳೆನ್ನಲಾಗಿದೆ.

ಮಾನಿನಿಯು ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಪೋಕ್ಸೋ ಕಾಯಿದೆ, ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ದಂಡ ಸಂಹಿತೆಯ ಆಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಹಾಯಕ ಕಮಿಷನರ್‌ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!