ಮಂಗಳೂರು : ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿರುವ ಪ್ರಮುಖ ನಾಲ್ವರು ಆರೋಪಿಗಳ ಬಗ್ಗೆ ಸುಳಿವು ಕೊಟ್ಟರೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ NIA ಘೋಷಿಸಿದೆ. ಕಳೆದ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಪೊಲೀಸರು ಸುಮಾರು 10 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೊಲೆಗೆ ಪ್ರಮುಖವಾಗಿ ಸಂಚು ರೂಪಿಸಿದ ಹಾಗೂ ಸಹಾಯ ಮಾಡಿದ ಪ್ರಮುಖ ಆರೋಪಿಗಳ ಬಂಧನವಾಗದೆ ಪ್ರಕರಣ ಕಗ್ಗಂಟಾಗಿತ್ತು.

ಈ ಹಿನ್ನಲೆಯಲ್ಲಿ ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು, ಪ್ರಮುಖ ಆರೋಪಿಗಳಾದ ಬೆಳ್ಳಾರೆಯ ಮಹಮ್ಮದ್ ಮುಸ್ತಾಫಾ ಮತ್ತು ಮಡಿಕೇರಿಯ ತುಫೈಲ್ ಬಗ್ಗೆ ಸುಳಿವು ನೀಡಿದರೆ ತಲಾ 5 ಲಕ್ಷ ರೂ. ಬಹುಮಾನ, ಜೊತೆಗೆ ಕೊಲೆಗೆ ಸಹಕಾರ ನೀಡಿದ ಸುಳ್ಯದ ಉಮ್ಮರ್ ಫಾರೂಕ್ ಹಾಗೂ ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್ ‌ಬಗ್ಗೆ ಮಾಹಿತಿ ನೀಡಿದರೆ ತಲಾ 2 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ಜೊತೆಗೆ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದೂ ತನಿಖಾ ಸಂಸ್ಥೆ ತಿಳಿಸಿದೆ.

ಮಾಹಿತಿದಾರರು ಅಥವಾ ದೂರವಾಣಿ ಸಂಖ್ಯೆ 080-29510900/8904241100 ಅಥವಾ ಪೊಲೀಸ್ ಅಧೀಕ್ಷಕರು, ರಾಷ್ಟ್ರೀಯ ತನಿಖಾ ದಳ (ಎನ್​ಐಎ), 8ನೇ ಮಹಡಿ, ಸರ್. ಎಂ ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಮಲೂರು, ಬೆಂಗಳೂರು 560071 ಈ ವಿಳಾಸಕ್ಕೆ ಸಂಪರ್ಕಿಸುವಂತೆ ವಿನಂತಿಸಲಾಗಿದೆ.

By admin

Leave a Reply

Your email address will not be published. Required fields are marked *

error: Content is protected !!