ಮಂಗಳೂರು: ಯುವತಿಯೋರ್ವಳು ಇನ್ಸ್ಟಾಗ್ರಾಮ್‌ನಲ್ಲಿ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆಗೆ ಇದೀಗ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸದ್ಯ ಸಿನೆಮಾ ಜಗತ್ತಿನಲ್ಲಿ ಹವಾ ಸೃಷ್ಟಿಸಿದ್ದು ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂತಾರ ಕುರಿತ ಪೋಸ್ಟ್‌, ರೀಲ್ಸ್‌ ಹಾಗೂ ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತಿವೆ.

ಮೇಕಪ್ ಅರ್ಟಿಸ್ಟ್ ಆಗಿರೋ ಶ್ವೇತಾ ರೆಡ್ಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ, ವೇಷ ಧರಿಸಿ ರೀಲ್ಸ್ ಮಾಡಿ ಅಪ್‌ಲೋಡ್‌ ಮಾಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಯುವತಿ ವಿರುದ್ದ ಆಕ್ರೋಶ ಕೇಳಿ ಬಂದಿದೆ. ಸಿನಿಮಾದ ವರಾಹ ರೂಪಂ ಹಾಡಿಗೆ ರೀಲ್ಸ್ ಮಾಡಲು ದೈವಾರಾಧನೆ ಅಣಕ ಮಾಡಿರುವ ಯುವತಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ದೈವಾರಾಧನೆಯು ತುಳುನಾಡಿನ ಧಾರ್ಮಿಕ ನಂಬಿಕೆಯ ಭಾಗವಾಗಿದೆ. ಹೀಗಾಗಿ ತುಳುನಾಡಿನ ನಂಬಿಕೆಗೆ ಇದರಿಂದ ಧಕ್ಕೆಯಾಗಿದೆ, ರೀಲ್ಸ್‌ನ್ನು ತಕ್ಷಣ ಡಿಲೀಟ್‌ ಮಾಡಿ ಕ್ಷಮೆ ಕೇಳುವಂತೆ ಹಲವರು ಕಾಮೆಂಟ್‌ ಮಾಡಿದ್ದಾರೆ. ಆಕ್ರೋಶದ ಬಳಿಕ ಇನ್‌ಸ್ಟಾಗ್ರಾಮ್‌ ಖಾತೆಯಿಂದ ಯುವತಿ ರೀಲ್ಸ್‌ ಡಿಲೀಟ್‌ ಮಾಡಿದ್ದಾಳೆ. “ತುಳುನಾಡಿನ ದೈವ ದೇವರುಗಳು ಎಂದರೆ ನಿಮಗೆ ಮನರಂಜನೆ ವಸ್ತು ಅನ್ಕೋಂಡ್ರ ಅವಿವೇಕಿಗಳೆ, ನಿಮ್ಮ ಲೈಕ್ ಕಮೆಂಟ್ ಫಾಲೋವರ್ಸ್ ಗಾಗಿ ನಮ್ಮ ನಂಬಿಕೆಗಳ ಜತೆಗೆ ಆಟವಾಡಬೇಡಿ.

ಮರ್ಯಾದೆಯಲ್ಲಿ ಪೋಸ್ಟ್ ಡಿಲೀಟ್ ಮಾಡಿ. ನಿಮ್ಮ ತೀಟೆಗೆ ನಮ್ಮ ನಂಬಿಕೆ ಬಳಸಿಕೊಳ್ಳಬೇಡಿ” ಎಂದು ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇನ್ನು ಫಾಲೋವರ್ಸ್‌ ಲೈಕ್ ಗೋಸ್ಕರ ನಮ್ಮ ದೈವ ದೇವರನ್ನು ಅವಮಾನ ಮಾಡಿದರೇ ಖಂಡಿತವಾಗಿಯೂ ನಾವು ಸುಮ್ಮನೆ ಇರಲ್ಲ, ಮರ್ಯಾದಿಯಿಂದ ಪೊಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದರೆ ಸರಿ…! ಇಲ್ಲದಿದ್ದರೆ ಮುಂದೆ ಆಗುವ ಎಲ್ಲ ಪರಿಣಾಮಕ್ಕೆ ನೀವೇ ಹೊಣೆ” ಎಂದು ಮತ್ತೊಬ್ಬರು ಪೋಸ್ಟ್‌ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಬಳಿಕ ಯುವತಿ ಇನ್‌ಸ್ಟಾಗ್ರಾಮ್‌ ಖಾತೆಯಿಂದ ರೀಲ್ಸ್‌ಗಳನ್ನು ಡಿಲೀಟ್‌ ಮಾಡಿದ್ದಾಳೆ.

By admin

Leave a Reply

Your email address will not be published. Required fields are marked *

error: Content is protected !!