ಮಂಗಳೂರು : ಟೋಲ್‌ಗೇಟ್ ವಿಚಾರವಾಗಿ ನಡೆದ ಪ್ರತಿಭಟನೆ ವಿಷಯದಲ್ಲಿ ನನ್ನನ್ನು ಟ್ರೋಲ್ ಮಾಡುತ್ತಿರುವ ಸಂಬಂಧ ಹೆದರುವ ಪ್ರಶ್ನೆಯೇ ಇಲ್ಲ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ನನ್ನ ರಾಜಕೀಯ ಬೆಳವಣಿಗೆಗೆ ಇದು ಇನ್ನಷ್ಟು ಪ್ರಯೋಜನಕಾರಿಯಾಗಲಿದೆ ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ. ಅಕ್ಟೋಬರ್ 18ರಂದು ಸುರತ್ಕಲ್‌ನಲ್ಲಿ ನಡೆದ ಟೋಲ್ ಗೇಟ್ ಪ್ರತಿಭಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಟ್ರೋಲ್ ಮಾಡುತ್ತಿರುವ ಕುರಿತು ದೂರು ದಾಖಲಿಸುವ ವಿಚಾರವಾಗಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ನನ್ನ ಶೈಕ್ಷಣಿಕ ಅರ್ಹತೆ ಮತ್ತು ಮಹಿಳಾ ಸಬಲೀಕರಣ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿರುವುದೇ ನನ್ನ ಧೈರ್ಯದ ಹಿಂದಿನ ಕಾರಣ ಎಂದರು.

ಟೋಲ್‌ಗೇಟ್ ವಿಚಾರವಾಗಿ ನಡೆದ ಜನಪರ ಪ್ರತಿಭಟನೆ ನನಗೆ ಖುಷಿ ತಂದಿದೆ. ನನ್ನ ಕಿರುಚಾಟದ ವೀಡಿಯೋವನ್ನು ಟ್ರೋಲ್ ಮಾಡುತ್ತಿರುವವರಿಗೆ ನಾನು ಹೇಳುವುದಿಷ್ಟೇ, ಅದೇನು ಲಂಚ ಮತ್ತು ಮಂಚ (ಭ್ರಷ್ಟಾಚಾರ ಅಥವಾ ಲೈಂಗಿಕ ಹಗರಣ) ಕುರಿತ ವೀಡಿಯೋವಲ್ಲ. ಲೈಂಗಿಕ ಹಗರಣ, ಭ್ರಷ್ಟಾಚಾರದ ವೀಡಿಯೋ ವೈರಲ್ ಆಗಿದ್ದರೂ ಬಿಜೆಪಿ ನಾಯಕರಾದ ಹಾಲಪ್ಪ, ರಘುಪತಿ ಭಟ್, ಜಾರಕಿಹೊಳಿ, ಈಶ್ವರಪ್ಪ ಅವರೆಲ್ಲ ಧೈರ್ಯವಾಗಿ ಸಾರ್ವಜನಿಕರನ್ನು ಎದುರಿಸಿ ಚುನಾವಣೆಗೆ ನಿಲ್ಲುತ್ತಾರೆ. ಹಾಗಂದಮೇಲೆ ಜನಪರ ಪ್ರತಿಭಟನೆಗೆ ಸಂಬಂಧಿಸಿದ ವೀಡಿಯೋ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು.

ರಾಜಕೀಯದಲ್ಲಿ ದಶಕದ ಅನುಭವ ನನಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಂತೆ ನಾನು ಯಾವುದೇ ಕತೆ ಕಟ್ಟಿಲ್ಲ. ಬದಲಾಗಿ ಸುಲಿಗೆ ಕೇಂದ್ರ ಸುರತ್ಕಲ್ ಟೋಲ್‌ಗೇಟ್ ವಿರುದ್ದ ಹೋರಾಡಿ, ಸಮಾಜಕ್ಕಾಗಿ ಧ್ವನಿ ಎತ್ತಿದ್ದೇನೆ ಎಂದು ಪ್ರತಿಭಾ ಕುಳಾಯಿ ಇದೇ ವೇಳೆ ತಿಳಿಸಿದರು.

ಪ್ರತಿಭಟನೆಯಲ್ಲಿ ನನ್ನ ಕಿರುಚಾಟದ ವೀಡಿಯೋವನ್ನು ಕಾಂತಾರ ಭಾಗ ಎರಡರಂತೆ ಹೋಲಿಕೆ ಮಾಡಿದ್ದಾರೆ. ಕೋಡಿಕೆರೆ ಗ್ಯಾಂಗ್‌ನ್ನು ನಿಭಾಯಿಸುವಾಗಲೇ ನನ್ನ ಕಾಂತಾರ ಭಾಗವನ್ನು ತೋರಿಸಿದ್ದೇನೆ. ಅಲ್ಲದೆ ಅನುಚಿತ ವರ್ತನೆ ತೋರಿದ ಅಬ್ದುಲ್ ಸತ್ತಾರ್‌ಗೆ ಛೀಮಾರಿ ಹಾಕಿದ್ದು ನನ್ನ ಕಾಂತಾರ ಎರಡನೇ ಭಾಗ. ಸುರತ್ಕಲ್‌ನಲ್ಲಿ ಮೊಹಿಯುದ್ದೀನ್ ಬಾವಾ ಅವರು ಸ್ಥಾನ ಕಳೆದುಕೊಂಡ ಬಳಿಕ ಅಲ್ಲಿ ತಲೆ ಎತ್ತುತ್ತಿರುವ ಕಟ್ಟಡವೊಂದರ ಬಗ್ಗೆ ಕಾಂತಾರ ಮೂರನೇ ಭಾಗ ತೋರಿಸಲಾಗುವುದು. ಅಲ್ಲದೆ ಇಂತಹ ಅನೇಕ ವಿಚಾರಗಳನ್ನು ಮುಂದೆ ಮಾತನಾಡುತ್ತೇನೆ ಎಂದರು.

ಇನ್ನು ಕೆಲವರು ನನ್ನನ್ನು ನಾಗವಲ್ಲಿ ಪಾತ್ರಕ್ಕೆ ಹೋಲಿಸಿ ಟ್ರೋಲ್ ಮಾಡಿದ್ದಾರೆ. ಆದರೆ ನಾನು ಸಿನಿಮಾದಲ್ಲಿ ತೋರಿಸಿರುವ ನಾಗವಲ್ಲಿ ಅಲ್ಲ, ಮೂಲ ನಾಗವಲ್ಲಿ. ಬಿಲ್ಲವ ಸಮುದಾಯ, ಕೋಟಿ ಚೆನ್ನಯ ಮತ್ತು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರನ್ನು ಟೀಕಿಸಿದಕ್ಕಾಗಿ ಬಿಜೆಪಿ ನಾಯಕ ಜಗದೀಶ್ ಅಧಿಕಾರಿಗೆ ಕಪ್ಪು ಬಣ್ಣ ಬಳಿಯಲು ನಾನು 1 ಲಕ್ಷ ರೂ. ಘೋಷಣೆ ಮಾಡಿದಾಗಲೇ ಬಹುಶಃ ಆ ಪಾತ್ರ ಅರ್ಥವಾಗಿರಬಹುದು. ಅಶ್ಲೀಲವಾಗಿ ನನ್ನನ್ನು ನಿಂದಿಸಿದ ವ್ಯಕ್ತಿಯೊಬ್ಬನನ್ನು ಮಧ್ಯರಾತ್ರಿ 12 ಗಂಟೆಗೆ ಬಾಗಿಲು ಬಡಿದು ಕ್ಷಮೆ ಕೇಳುವಂತೆ ಮಾಡಿದ್ದೇನೆ ಎಂದು ಅಶ್ಲೀಲವಾಗಿ ನಿಂದಿಸುವವರಿಗೆ ಎಚ್ಚರಿಸಿದರು.

ಅಕ್ಟೋಬರ್ 18 ರಂದು ಸುರತ್ಕಲ್ ಟೋಲ್‌ಗೇಟ್ ಪ್ರತಿಭಟನೆಯಲ್ಲಿ ನನ್ನ ಪೋಸ್ಟ್‌ಗೆ ಅವಹೇಳನಕಾರಿ ಮತ್ತು ಅಸಭ್ಯವಾಗಿ ಕಾಮೆಂಟ್ ಮಾಡಿದ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಮತ್ತು ಕೆ.ಆರ್. ಶೆಟ್ಟಿ ಅಡ್ಯಾರ್‌ಪದವ ಅವರ ವಿರುದ್ಧ ದೂರು ದಾಖಲಿಸುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಪ್ರತಿಭಾ ಕುಳಾಯಿ ಇದೇ ವೇಳೆ ಸುದ್ದಿಗಾರರಿಗೆ ತಿಳಿಸಿದರು.

ಶ್ಯಾಮ ಸುದರ್ಶನ್ ಭಟ್ ಅವರಿಗೆ ಸ್ವಲ್ಪ ಮಾನಸಿಕ ಅಸ್ವಸ್ಥತೆ ಇದೆ. ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ, ಅವಹೇಳನಕಾರಿ ಕಾಮೆಂಟ್ ಹಾಕುವ ಮುನ್ನ ತನ್ನ ತಾಯಿ, ಸಹೋದರಿ, ಪತ್ನಿಯನ್ನು ಆತ ನೆನಪು ಮಾಡಿಕೊಳ್ಳಬೇಕು. ಅವರೊಬ್ಬ ಬಿಜೆಪಿ ಪ್ರತಿನಿಧಿ. ಧರ್ಮ, ಮಹಿಳೆ, ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಮಾತನಾಡುವ ಬಿಜೆಪಿ ಅವರ ಸಂಸ್ಕೃತಿಯನ್ನು ಇಂತಹ ಪೋಸ್ಟ್, ಕಾಮೆಂಟ್‌ಗಳ ಮೂಲಕ ತೋರಿಸುತ್ತದೆ ಎಂದರು.

ಪ್ರತಿಭಟನೆ ವೇಳೆ ನನ್ನ ಬ್ಲೌಸ್ ಹರಿದಿದ್ದು ಅಸಹಾಯಕತೆಯಿಂದ ಕಿರುಚಿದೆ. ಆದರೆ ಆ ಅಸಹಾಯಕತೆಯನ್ನು ಬಳಸಿಕೊಂಡು ಟ್ರೋಲ್ ಮಾಡಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಪ್ರತಿಭಾ ದೂರಿದರು.

By admin

Leave a Reply

Your email address will not be published. Required fields are marked *

error: Content is protected !!