ಮಂಗಳೂರು: ಗರ್ಭಧಾರಣೆಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ಮಾಡಿದ್ದಾರೆನ್ನಲಾದ ಎಡವಟ್ಟಿನಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ ಬೇರೊಂದು ದೈಹಿಕ ಆರೋಗ್ಯ ಸಮಸ್ಯೆಗೆ ಸಿಲುಕಿರುವ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ತಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮಹಿಳೆಯ ಕುಟುಂಬಸ್ಥರು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿಗೆ ಮನವಿ ಮಾಡಿದ್ದಾರೆ.

ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಚಂದ್ರ ಶೇಖರ ಅವರ ಪತ್ನಿ 37 ವರ್ಷ ಪ್ರಾಯದ ಇಂದಿರಾ ಅವರು ತೊಂದರೆಗೊಳಗಾದ ಮಹಿಳೆ. ಮಹಿಳೆಯ ಕುಟುಂಬದ ಪರವಾಗಿ ಬಂಟ್ವಾಳದ ರಾಯಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ರಶ್ಮಿತ್‌ ಶೆಟ್ಟಿ ಅವರು ಪ್ರಕರಣದ ಕುರಿತಂತೆ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇಂದಿರಾ ಅವರು ಗರ್ಭಧಾರಣೆಯ ಬಗ್ಗೆ ಸ್ಕ್ಯಾನಿಂಗ್‌ ಮಾಡಲು ಬಂಟ್ವಾಳದ ಮೆಲ್ಕಾರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿನ ವೈದ್ಯೆ ಡಾ। ಕಾವ್ಯ ರಶ್ಮೀ ರಾವ್‌ , ಶಸ್ರ್ರಚಿಕಿತ್ಸೆಯೊಂದರ ಅಗತ್ಯವಿದೆ, ಅದಕ್ಕೆ 60,000 ರೂ. ವೆಚ್ಚವಾಗುತ್ತದೆ ಎಂದಿದ್ದರು. ಹಾಗೆ ಕಳೆದ ಜೂನ್‌ 17 ರಂದು ಗರ್ಭಧಾರಣೆ ಸಂಬಂಧಿತ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಮಲ ಹೋಗುವ ಭಾಗಕ್ಕೆ ತೊಂದರೆ ಆಗಿರುವುದರಿಂದ ಮಲದ ಬ್ಯಾಗ್‌ ಹೊರಗೆ ಹಾಕಿ ಒಂದು ವಾರದ ಬಳಿಕ ಇನ್ನೊಂದು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.

ಈ ಆಸ್ಪತ್ರೆಯಲ್ಲಿ ಇನ್ನೊಂದು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಆದರೆ ಮಲ ಶೇಖರಣೆಯ ಬ್ಯಾಗ್‌ ಹೊಟ್ಟೆಯಿಂದ ಹೊರಗೆಯೇ ಇರಿಸಲಾಗಿದೆ. ಅಲ್ಲಿ 1,75,000 ರೂ. ಬಿಲ್‌ ಮಾಡಿದ್ದಾರೆ. ಡಿಸ್‌ಚಾರ್ಜ್ ಆಗಿ ಮನೆಗೆ ಹೋದರೂ 15 ದಿನಗಳಿಗೊಮ್ಮೆ ಆಸ್ಪತ್ರೆಗೆ ತೆರಳಿ ಮಲ ಶೇಖರಣೆಯ ಬ್ಯಾಗ್‌ ಬದಲಾಯಿಸಬೇಕಿದ್ದು,ಆದಕ್ಕೆ 5000 ರೂ. ಖರ್ಚಾಗುತ್ತದೆ. ಈ ನಡುವೆ ಸೆ.9 ರಂದು ಮಲ ಶೇಖರಣೆಯ ಬ್ಯಾಗ್‌ ತೆಗೆಯಲೆಂದು ಬಂಟ್ವಾಳ ಆಸ್ಪತ್ರೆಗೆ ಕರೆಸಿ ಡಾ। ಕಾವ್ಯ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಆದರೆ ಅದು ಸರಿಯಾಗಿಲ್ಲ ಎಂದು ಪುನಃ ಪುತ್ತೂರಿನ ಆಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿ ಸೆ. 12 ರಂದು ಇನ್ನೊಂದು ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ಆದರೆ ಮಲ ಶೇಖರಣೆಯ ಬ್ಯಾಗ್‌ ಹೊಟ್ಟೆಯ ಹೊರ ಭಾಗದಲ್ಲಿಯೇ ಇದೆ. ಇದೀಗ ಇಂದಿರಾ ಅವರು ಪುತ್ತೂರಿನ ಆಸ್ಪತ್ರೆಯಲ್ಲಿಯೇ ಇದ್ದಾರೆ. ಅಲ್ಲಿ 1,70,000 ರೂ. ಬಿಲ್‌ ಆಗಿದೆ ಎಂದು ವಿವರಿಸಿದರು. ಇಂದಿರಾ ಅವರ ಪತಿ ಚಂದ್ರಶೇಖರ್‌ ಮಾತನಾಡಿ, ನಾನು ಕೂಲಿ ಕಾರ್ಮಿಕ. ಮೊದಲ ಬಿಲ್‌ 1,75,000 ರೂ. ಗಳನ್ನು ಸಾಲ ಮಾಡಿ ಪಾವತಿಸಿದ್ದೇನೆ. ಪತ್ನಿಗೆ ಎದ್ದು ನಡೆದಾಡಲು ಸಾಧ್ಯವಾಗುತ್ತಿಲ್ಲ. ಈಗ ನಮ್ಮನ್ನು ಪುತ್ತೂರಿನ ಆಸ್ಪತ್ರೆಗೆ ಕಳುಹಿಸಿದ ಡಾ। ಕಾವ್ಯ ರಶ್ಮೀ ರಾವ್‌ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನನಗೆ ನ್ಯಾಯ ಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪರಮೇಶ್ವರ ಪೂಜಾರಿ, ದಯಾನಂದ ಶೆಟ್ಟಿ, ಶ್ಯಾಮಲಾ, ಶೋಭಾ, ಸುದೇಶ್‌ ಭಟ್‌, ಹರೀಶ್‌ ಅವರಿದ್ದರು.

By admin

Leave a Reply

Your email address will not be published. Required fields are marked *

error: Content is protected !!