ಮಂಗಳೂರು:ಅರ್ಟಿಕಲ್ 347ರ ಪ್ರಕಾರ ತುಳುಭಾಷೆಯನ್ನು ರಾಜ್ಯ ಅಧಿಕೃತ ಭಾಷೆಯನ್ನಾಗಿ ಅ.25ರೊಳಗೆ ಮಾಡದಿದ್ದಲ್ಲಿ ನವೆಂಬರ್ 1ರಂದು ಉಡುಪಿ, ದ.ಕ.ಜಿಲ್ಲಾ ಬಂದ್ ಮಾಡಲಾಗುವುದು ಎಂದು ತುಳು ಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ತುಳು ಭಾಷೆಗೆಅಧಿಕೃತ ಸ್ಥಾನ ಮಾನ ನೀಡಲು ಸರ್ಕಾರವನ್ನು ಒತ್ತಾಯಿಸಲು ಮಂಗಳೂರಿನಲ್ಲಿ ಇಂದು ಸಮಾನ ಮನಸ್ಕ ಸಂಘಟನೆಗಳು, ತುಳು ಚಲನಚಿತ್ರ – ರಂಗಭೂಮಿ ಕಲಾವಿದ ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು.

ತುಳುನಾಡಿಗೆ ಅನ್ಯಾಯ ಮಾಡಿದ ಯಾರನ್ನೂ ಇಷ್ಟರವರೆಗೆ ದೈವಗಳು ಬಿಟ್ಟಿಲ್ಲ. ತುಳುನಾಡಿನ ಜೀವನದಿ ನೇತ್ರಾವತಿ ನದಿ ತಿರುವು ಯೋಜನೆ ತಂದ ಸಂದರ್ಭ ಹೋರಾಟಗಾರರು ದೈವದ ಮುಂದೆ ಪ್ರಾರ್ಥಿಸಿದರು. ಈ ಯೋಜನೆ ತಂದ ಇಬ್ಬರು ರಾಜಕೀಯ ನಾಯಕರು ಈಗ ಮೂಲೆಗುಂಪಾಗಿದ್ದಾರೆ.

ಆರ್ಟಿಕಲ್ 347ರ ಪ್ರಕಾರ ತುಳುಭಾಷೆಯನ್ನು ರಾಜ್ಯ ಅಧಿಕೃತ ಭಾಷೆಯನ್ನಾಗಿ ಅ.25ರೊಳಗೆ ಮಾಡದಿದ್ದಲ್ಲಿ ತುಳುಭಾಷಿಗರು ಎಲ್ಲಾ ದೈವಸ್ಥಾನಗಳಿಗೆ ಹೋಗಿ ಸಚಿವರುಗಳನ್ನು ದೈವಗಳು ನೋಡಲೆಂದು ಪ್ರಾರ್ಥಿಸಬೇಕು.

ಜೊತೆಗೆ ನವೆಂಬರ್ 1ಕ್ಕೆ ಉಡುಪಿ, ದ.ಕ.ಜಿಲ್ಲೆ ಬಂದ್ ಗೆ ಕರೆ ಕೊಡಬೇಕು ಎಂದು ತುಳುಪರ ಹೋರಾಟಗಾರ ಸುದರ್ಶನ ಸುರತ್ಕಲ್ ಖಡಕ್ ಎಚ್ಚರಿಕೆ ನೀಡಿದರು.

‘ಅಪ್ಪೆ ಬಾಸೆ ಪೊರುಂಬಾಟ ಕೂಟ ತುಳುನಾಡು’ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ ‘ಅಪ್ಪೆ ಬಾಸೆ ಮಾನಾದಿಗೆಗ್ ಪ್ರತಿಭಟನೆ’ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ತುಳು ರಂಗಭೂಮಿ ಹಾಗೂ ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಮಾತನಾಡಿ, ಕನ್ನಡ ಹಾಗೂ ತುಳು ಭಾಷೆ ತುಳುಭಾಷಿಗರ ಎರಡು ಕಣ್ಣುಗಳಿದ್ದಂತೆ. ಯಾವತ್ತೂ ನಾವು ಕನ್ನಡವನ್ನು ನಿರ್ಲಕ್ಷ್ಯ ಮಾಡುವುದಿಲ್ಲ.

ನಮ್ಮ ನೆಲದಲ್ಲಿ ನಾವು ತುಳುವನ್ನೇ ಬಳಸುತ್ತೇವೆ. ಕರಾವಳಿಯಲ್ಲಿ ಕನ್ನಡವನ್ನು ಕಡ್ಡಾಯ ಮಾಡಲು ಹೊರಟಿರುವ ಸಚಿವ ಸುನಿಲ್ ಕುಮಾರ್ ಕಾರ್ಕಳದಲ್ಲಿ ಕನ್ನಡದಲ್ಲೇ ಮತಯಾಚನೆ ಮಾಡಿ ಗೆದ್ದು ಬರಲಿ. ಆಗ ನಾವು ಈ ತುಳು ಹೋರಾಟವನ್ನು ಕೈಬಿಡುತ್ತೇವೆ ಎಂದು ಸವಾಲೆಸೆದರು.

By admin

Leave a Reply

Your email address will not be published. Required fields are marked *

error: Content is protected !!