ರಾಜ್ಯದ ಪರಿಶಿಷ್ಟರ ಜೀವನ ಮಟ್ಟ ಸುಧಾರಣೆಯ ದೃಷ್ಟಿಯಿಂದ ರಾಜ್ಯ ಸರಕಾರವು ಎಸ್.ಟಿ. ಸಮುದಾಯ ಮೀಸಲಾತಿಯನ್ನು ಶೇ. 3ರಿಂದ ಶೇ.7ಕ್ಕೆ ಹೆಚ್ಚಿಸುವ ಮೂಲಕ ಸಮುದಾಯಕ್ಕೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಭಾಂಗಣದಲ್ಲಿ ಬಂಟ್ವಾಳ ಬಿಜೆಪಿ ಎಸ್.ಟಿ. ಮೋರ್ಚಾದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ದೇರಳಕಟ್ಟೆ ಯೇನಪೋಯ ವೈದ್ಯಕೀಯ ವಿವಿಯ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮೀಸಲಾತಿ ಹೆಚ್ಚಳದ ದೃಷ್ಟಿಯಿಂದ ಪಕ್ಷದ ಕಾರ್ಯಕಾರಿಣಿಯಲ್ಲೂ ಪ್ರಸ್ತಾಪಗೊಂಡಿದ್ದು, ವಾಲ್ಮೀಕಿ ಜಯಂತಿಯ ಶುಭ ಸಂದರ್ಭದಲ್ಲಿ ಕ್ಯಾಬಿನೆಟ್ ನ ಒಪ್ಪಿಗೆಯನ್ನು ಪಡೆದು ಮೀಸಲಾತಿ ಹೆಚ್ಚಳದ ಮಹತ್ವದ ತೀರ್ಮಾನ ಪ್ರಕಟಗೊಂಡಿದೆ. ಪರಿಶಿಷ್ಟರ ಆರೋಗ್ಯದ ದೃಷ್ಟಿಯಿಂದ ಸರಕಾರ ವಿಶೇಷ ಗಮನಹರಿಸಿ ಅದರ ಜತೆಗೆ ಇತರ ಸಮುದಾಯದವರ ಆರೋಗ್ಯದ ದೃಷ್ಟಿಯಿಂದ ಖಾಸಗಿ ಕ್ಷೇತ್ರದಲ್ಲಿ ದುಬಾರಿಯಾಗುವ ಆರೋಗ್ಯ ತಪಾಸಣೆಗಳನ್ನು ಯೆನಪೋಯ ವಿವಿಯ ಸಹಯೋಗದೊಂದಿಗೆ ತಪಾಸಣೆಯ ಕಾರ್ಯ ಮಾಡುತ್ತಿದ್ದು, ಚಿಕಿತ್ಸೆಗೂ ನೆರವು ನಿಡುತ್ತಿದೆ ಎಂದರು.
ಬಂಟ್ವಾಳ ಎಸ್‌.ಟಿ. ಮೋರ್ಚಾ ಅಧ್ಯಕ್ಷ ರಾಮ ನಾಯ್ಕ್ ಕುಕ್ಕಿನಾರು ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಅವರು ಮಹರ್ಷಿ ವಾಲ್ಮೀಕಿ ಅವರ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಮೋರ್ಚಾದ ಪ್ರಭಾರಿ ರಮನಾಥ ರಾಯಿ, ಬಾಳ್ತಿಲ ಗ್ರಾ.ಪಂ. ಅಧ್ಯಕ್ಷೆ ಹಿರಣ್ಮಯಿ, ಬರಿಮಾರು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಗೋಳ್ತಮಜಲು ಗ್ರಾ.ಪಂ. ಅಧ್ಯಕ್ಷ ಅಭಿಷೇಕ್ ಶೆಟ್ಟಿ, ದೇರಳಕಟ್ಟೆ ಯೆನಪೋಯ ಆಸ್ಪತ್ರೆಯ ವೈದ್ಯೆ ಡಾ. ಅಶ್ವಿನಿ ಶೆಟ್ಟಿ ವೇದಿಕೆಯಲ್ಲಿದ್ದರು.
ರಾಜ್ಯ ಎಸ್.ಟಿ. ಮೋರ್ಚಾ ಜಿಲ್ಲಾ ಮಾಧ್ಯಮ ಸಂಚಾಲಕರಾದ ಜಯರಾಮ್ ನಾಯ್ಕ್ ಕುಂಟ್ರಕಲ, ಜಿಲ್ಲಾ ಎಸ್.ಟಿ. ಮೋರ್ಚಾ ಕ್ಷೇತ್ರ ಮಾಧ್ಯಮ ಸಂಚಾಲಕರಾದ ಪುರುಷೋತ್ತಮ ನಾಯ್ಕ್ ನರಿಕೊಂಬು, ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶವಂತ ನಗ್ರಿ ಮುಂತಾದವರು ಉಪಸ್ಥಿತರಿದ್ದರು.
ಬರಿಮಾರು ಗ್ರಾ.ಪಂ. ಸದಸ್ಯೆ ಪುಷ್ಪಲತಾ ಸ್ವಾಗತಿಸಿದರು. ಬಾಳ್ತಿಲ ಗ್ರಾ.ಪಂ. ಸದಸ್ಯ ವಿಠಲ್ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.

By admin

Leave a Reply

Your email address will not be published. Required fields are marked *

error: Content is protected !!