ದೆಹಲಿ:ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (Jawaharlal Nehru University) ವಿದ್ಯಾರ್ಥಿಗಳ ಗುಂಪು ಎರಡು ವರ್ಷಗಳಿಂದ ತಡೆಹಿಡಿಯಲಾದ ವಿದ್ಯಾರ್ಥಿವೇತನದ ಹಣವನ್ನು ಬಿಡುಗಡೆ ಮಾಡುವಂತೆ ಶಾಂತಿಯುತವಾಗಿ ಒತ್ತಾಯಿಸುತ್ತಿರುವಾಗ ಸಂಸ್ಥೆಯಲ್ಲಿ ನಿಯೋಜನೆಗೊಂಡ ಭದ್ರತಾ ಸಿಬ್ಬಂದಿ ತಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಎಬಿವಿಪಿ (ABVP) ಸದಸ್ಯರು ಮತ್ತು ಕ್ಯಾಂಪಸ್ ಸೆಕ್ಯುರಿಟಿ ಗಾರ್ಡ್‌ಗಳ ನಡುವಿನ ಘರ್ಷಣೆ ನಡೆದಿದ್ದು ಹಲವಾರು ವಿದ್ಯಾರ್ಥಿಗಳಿಗೆ ಗಾಯವಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಬೆಳಗ್ಗೆ ಸುಮಾರು 11ಗಂಟೆ ವೇಳೆ ಐವರು ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಬಗ್ಗೆ ವಿಚಾರಿಸಲು ಸ್ಕಾಲರ್ ಶಿಪ್ ವಿಭಾಗಕ್ಕೆ ಹೋಗಿದ್ದಾರೆ. ಸ್ಕಾಲರ್ಶಿಪ್ ಬಗ್ಗೆ ವಿಚಾರಿಸುವ ಸಮಯ ಅದಾಗಿತ್ತು ಎಂದು ಜೆಎನ್ ಯುವಿನ ಎಬಿವಿಪಿ ಅಧ್ಯಕ್ಷ ರೋಹಿತ್ ಕುಮಾರ್ ಹೇಳಿದ್ದಾರೆ. ವಿದ್ಯಾರ್ಥಿಗಳ ಜತೆ ಸೆಕ್ಯೂರಿಟಿ ಗಾರ್ಡ್ ಗಳು ಕೆಟ್ಟದಾಗಿ ವರ್ತಿಸಿ ನಿಂದಿಸಿದ್ದಾರೆ ಎಂದು ರೋಹಿತ್ ಕುಮಾರ್ ಹೇಳಿದ್ದಾರೆ. ಈ ವಿಭಾಗದಲ್ಲಿ ನಾಲ್ವರು ಸಿಬ್ಬಂದಿಗಳಷ್ಟೇ ಉಳಿದಿದ್ದಾರೆ. ಈ ಹಿಂದೆ 17 ಸಿಬ್ಬಂದಿಗಳು ಅಲ್ಲಿದ್ದರು. ಎರಡು ವರ್ಷಗಳಿಂದ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಅವರು ನಾನ್- ಎನ್ ಇಟಿ ಸ್ಕಾಲರ್ ಶಿಪ್, ಎಂಸಿಎಂ (Merit-cum-Means) ಅಥವಾ ಜೆಆರ್ ಎಫ್ ಸ್ಕಾಲರ್ ಶಿಪ್ ಪಡೆದಿಲ್ಲ ಎಂದು ರೋಹಿತ್ ಹೇಳಿದ್ದಾರೆ.

ಘಟನಾ ಸ್ಥಳದಲ್ಲಿನ ವಿಡಿಯೊಗಳನ್ನು ನೋಡಿದರೆ ಅದರಲ್ಲಿ ಸಮವಸ್ತ್ರ ಧರಿಸಿದ ಭದ್ರತಾ ಸಿಬ್ಬಂದಿಗಳ ಗುಂಪೊಂದು ಆಡಳಿತ ಕಚೇರಿಯ ಬಳಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಗುಂಪನ್ನು ತಳ್ಳುವ ಮತ್ತು ತಡೆಯಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಕೆಲವು ವಿಡಿಯೊಗಳಲ್ಲಿ ನೆಲದ ಮೇಲೆ ರಕ್ತದ ಕಲೆಗಳು, ಡಸ್ಟ್‌ಬಿನ್‌ಗಳಲ್ಲಿ ರಕ್ತಸಿಕ್ತ ಡ್ರೆಸ್ಸಿಂಗ್ ಮತ್ತು ನೆಲದ ಮೇಲೆ ಚದುರಿದ ಗಾಜುಗಳನ್ನು ಕಾಣಬಹುದು ಹಲವಾರು ವಿದ್ಯಾರ್ಥಿಗಳು, ತಮ್ಮ ಗಾಯಗಳನ್ನು ತೋರಿಸುತ್ತಾ ನಮ್ಮ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ ಗಂಭೀರ ಗಾಯಗಳಾಗಿವೆ ಎಂದು ಹೇಳಿದ್ದಾರೆ.

ಅಧಿಕಾರಕಾರಿಗಳು ಆಗಾಗ್ಗೆ ಅನುಚಿತವಾಗಿ ವರ್ತಿಸುತ್ತಾರೆ, ಸುಳ್ಳು ಹೇಳುತ್ತಾರೆ ಮತ್ತು ಸಮಯ ನೀಡಿದರೂ ತಮ್ಮ ದೂರುಗಳನ್ನು ಪರಿಹರಿಸುವುದಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಹಣ ಬಿಡುಗಡೆಯಾಗುವವರೆಗೂ ಕಚೇರಿಯಿಂದ ಕದಲುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದು ವಿಶ್ವವಿದ್ಯಾನಿಲಯ ಆಡಳಿತ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

By admin

Leave a Reply

Your email address will not be published. Required fields are marked *

error: Content is protected !!