ಬೆಂಗಳೂರು, ಆ. 21: ‘ಕೋವಿಡ್ ಸೋಂಕಿತ ರೋಗಿಗಳಿಂದ ಶುಲ್ಕ ಪಡೆಯುವುದರ ಜೊತೆಗೆ, ಸರಕಾರದಿಂದಲೂ ಹಣ ಪಡೆದ 577 ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿಸಿದ್ದು, 403 ಮಂದಿ ರೋಗಿಗಳ ಕುಟುಂಬಗಳಿಗೆ ಒಟ್ಟು 1.58 ಕೋಟಿ ರೂ.ಹಣವನ್ನು ಆಸ್ಪತ್ರೆಗಳಿಂದ ಪಡೆದು ಹಿಂದಿರುಗಿಸಿದ್ದು, ಆ ಎಲ್ಲ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾತನಾಡಿದ ಅವರು, ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ, ರೆಫರಲ್ ಆಧಾರದಲ್ಲಿ ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಹಿಂದೆಯೇ ಕ್ರಮ ವಹಿಸಲಾಗಿತ್ತು. ಕೋವಿಡ್ ರೋಗಿಗಳ ಕುಟುಂಬಕ್ಕೆ ನೆರವಾಗುವ ಸದುದ್ದೇಶದಿಂದ ಸರಕಾರ ಈ ಪ್ರಯೋಜನವನ್ನು ನೀಡುತ್ತಿದೆ. ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನಿಂದ ಭರಿಸಲಾಗುತ್ತದೆ. ಆದರೆ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಶುಲ್ಕ ವಸೂಲಿ ಮಾಡುವುದರ ಜೊತೆಗೆ, ಟ್ರಸ್ಟ್‍ನಿಂದಲೂ ಹಣ ಪಡೆದುಕೊಂಡಿವೆ’ ಎಂದರು.

ಈ ಕುರಿತು ದೂರುಗಳು ಬಂದಾಗ, ತಕ್ಷಣ ಕ್ರಮ ವಹಿಸಿದ್ದು, ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಅದರಂತೆ, ಈವರೆಗೆ 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಒಟ್ಟು 18.87 ಕೋಟಿ ರೂ.ಹಣವನ್ನು ಖಾಸಗಿ ಆಸ್ಪತ್ರೆಗಳು ಹೆಚ್ಚುವರಿಯಾಗಿ ಪಡೆದಿರುವುದು ತಿಳಿದು ಬಂದಿದೆ. ಈ ಪೈಕಿ ಈಗಾಗಲೇ 1.58 ಕೋಟಿ ರೂ. ಹಣವನ್ನು ರೋಗಿಗಳ ಕುಟುಂಬಕ್ಕೆ ಹಿಂದಿರುಗಿಸಲಾಗಿದೆ. ಕೆಲ ಪ್ರಕರಣಗಳಲ್ಲಿ ಹೆಚ್ಚಿನ ಪರಿಶೀಲನೆಗಾಗಿ ದೂರುಗಳನ್ನು ಜಿಲ್ಲಾ ಮಟ್ಟದ ಕುಂದು ಕೊರತೆ ಸಮಿತಿಗೆ ವರ್ಗಾಯಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೋವಿಡ್ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರಕಾರದಿಂದಲೇ ಭರಿಸಲಾಗಿದೆ. ಮೊದಲನೇ ಅಲೆಯಲ್ಲಿ, 2020ರ ಮಾರ್ಚ್‍ನಿಂದ 2021ರ ಮಾರ್ಚ್ ವರೆಗೆ 391.26 ಕೋಟಿ ರೂ., ಎರಡನೇ ಅಲೆಯಲ್ಲಿ 2021ರ ಎಪ್ರಿಲ್‍ನಿಂದ ಡಿಸೆಂಬರ್ ವರೆಗೆ 376.76 ಕೋಟಿ ರೂ. ಹಾಗೂ ಮೂರನೇ ಅಲೆಯ ವೇಳೆ 2022ರ ಜನವರಿಯಿಂದ ಮಾರ್ಚ್‍ವರೆಗೆ 11.80 ಕೋಟಿ ರೂ. ಪಾವತಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!