ಬೆಂಗಳೂರು : ಪದ್ಮಶ್ರೀ ಪುರಸ್ಕೃತ ಡಾ. ಸಾಲುಮರದ ತಿಮ್ಮಕ್ಕ 111 ನೇ ವರ್ಷದ ಸಂಭ್ರಮದಲ್ಲಿ ಕರ್ನಾಟಕದ ಪರಿಸರ ರಾಯಬಾರಿಯಾಗಿದ್ದಾರೆ. 111 ವರ್ಷ ಸಂಭ್ರಮದಲ್ಲಿರುವ ಸಾಲುಮರದ ತಿಮ್ಮಕ್ಕ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಿ ‘ಗ್ರೀನ್ ಅಂಬಾಸಿಡರ್’ ಗೌರವ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸಾಲುಮರದ ತಿಮ್ಮಕ್ಕ ಇಂಟರ ನ್ಯಾಷನಲ್ ಫೌಂಡೇಶನ್ ಸಂಸ್ಥೆ ಏರ್ಪಡಿಸಿದ್ದ ‘ಸಾಲುಮರದ ತಿಮ್ಮಕ್ಕ ಅವರ 111 ನೇ ಜನ್ಮ‌ದಿನಾಚರಣೆ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸಿದರು. ಇದೇ ವೇಳೆ ಸಾಲುಮರದ ತಿಮ್ಮಕ್ಕ ಅವರಿಗೆ ಕ್ಯಾಬಿನೆಟ್ ದರ್ಜೆಯ ಗ್ರೀನ್ ಅಂಬಾಸಿಡರ್ ಗೌರವ ನೀಡಿ ಅವರ ಸೇವೆಯನ್ನು ಸಿಎಂ ಬೊಮ್ಮಾಯಿ ಪ್ರಶಂಸೆ ಮಾಡಿದರು.

ಕರ್ಮದಿಂದ ಏನೆಲ್ಲ ಸಾಧನೆ ಮಾಡಲಿಕ್ಕೆ ಯಾವುದೇ ಪದವಿ ಬೇಕಿಲ್ಲ. ಯಾರ ನೆರವು ಬೇಕಿಲ್ಲ. ಯಾವ ಅವಕಾಶವೂ ಬೇಕಿಲ್ಲ. ಒಂದು ಧ್ಯೇಯ ಇದ್ದರೆ, ಕಾಯಕ ನಿಷ್ಠೆ ಮಾಡಿಕೊಂಡು ಸರ್ವರಿಗೂ ಒಳಿತು ಮಾಡುವ ಕೆಲಸ ಮಾಡಿದರೆ ಇಡೀ ಜಗತ್ತಿನಲ್ಲಿ ಬದಲಾವಣೆ ಮಾಡುವ ಪ್ರಭಾವಿಶಕ್ತಿ ಆಗಬಹುದು. ಎಂಬುದಕ್ಕೆ ನಮ್ಮ ಕರ್ನಾಟಕದಲ್ಲಿ, ನಮ್ಮ ನಡುವೆ ಇರುವುದು ಸಾಲುಮರದ ತಿಮ್ಮಕ್ಕ. ಜೀವನದಲ್ಲಿ ಎರಡು ಕೆಲಸ ಬಹಳ ಕಠಿಣ. ಹುಟ್ಟಿದಾಗ ಮುಗ್ಧತೆಯಿಂದ ಇರುತ್ತೇವೆ. ಮುಂದೆ ಮುಗ್ಧತೆಯನ್ನು ಕಳೆದುಕೊಳ್ಳುತ್ತೇವೆ. ಮುಗ್ಧತೆಯನ್ನು ಕೊನೆವರೆಗೂ ಇಟ್ಟುಕೊಳ್ಳುವುದು ಬಹಳ ಕಠಿಣ. ಸದಾ ಕಾಲ ಆತ್ಮಸಾಕ್ಷಿಯಿಂದ ನಡೆದುಕೊಳ್ಳುವುದು ಕಠಿಣ. ಈ ಎರಡು ಜಯಿಸಿದವರು ಬದುಕನ್ನು ಜಯಿಸಿದವರು ಮಾನವರಲ್ಲ, ದೇವ ಮಾನವರು. ಸಾಲು ಮರದ ತಿಮ್ಮಕ್ಕ ಅಜ್ಜಿ ಅವರ ಮುಖದಲ್ಲಿ ಮಗುವಿನ ಮುಗ್ಧತೆ ಇದೆ. ಅದು ಅವರ ಪ್ರಾಂಜಲವಾದ ಮನಸ್ಸು, ಶುದ್ಧ ಅಂತಃಕರಣದಿಂದ ಮಾಡಿರುವ ಕಾಯಕಯೋಗಿ. ಹೀಗಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸಾಲುಮರದ ತಿಮ್ಮಕ್ಕ ಅವರನ್ನು ಸ್ಮರಿಸಿದರು.

ಸಾಲುಮರದ ತಿಮ್ಮಕ್ಕ ಅವರನ್ನು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ನಾಲ್ಕು ಕಿ.ಮೀ. ಮರಗಳನ್ನು ನೆಟ್ಟು ನೀರು ಹಾಕಿ ಪೋಷಣೆ ಮಾಡಿರುವುದು ಅಸಾಮಾನ್ಯ. ಸಾಲುಮರದ ತಿಮ್ಮಕ್ಕ ಪ್ರೇರಣಾ ಶಕ್ತಿ. ಸಾಲ ಮರದ ತಿಮ್ಮಕ್ಕ ಪ್ರಚಾರ ಅಂದ್ರೆ ಪರಿಸರ ಶುದ್ಧೀಕರಣ ಪ್ರಚಾರ. ಪರಿಸರ ದಿನನಿತ್ಯ ಕಲುಷಿತಗೊಳ್ಳುತ್ತಿದೆ. 20 ವರ್ಷದಿಂದ ಪರಿಸರ ತುಂಬಾ ಜಾಸ್ತಿ ಕಲುಷಿತವಾಗುತ್ತಿದೆ. ಈ ಎಲ್ಲಾ ಪರಿಸರ ನಾಶಕ್ಕೆ ನಾವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಸಾಲು ಮರದ ತಿಮ್ಮಕ್ಕ ಅವರಿಗೆ ಪ್ರಶಸ್ತಿ ಬರುವುದರಿಂದ ಅವರ ಬದುಕು ಬದಲಾಗಲ್ಲ. ನಮ್ಮ ಸರ್ಕಾರ ಪರಿಸರ ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮ ರೂಪಿಸಲು ನೂರು ಕೋಟಿ ರೂ. ಹಣವನ್ನು ಬಜೆಟ್ ನಲ್ಲಿ ನೀಡಿದ್ದೇವೆ. ನಮ್ಮ ಕಾಡು,ನದಿಗಳು, ಸಸ್ಯ ಸಂಪತ್ತು, ಕೆರೆ ಕಟ್ಟೆಗಳು ಉಳಿಯಬೇಕು. ಎಲ್ಲದಕ್ಕೆ ಅಂಬಾಸಿಡರ್ ಸಾಲಮರದ ತಿಮ್ಮಕ್ಕ. ಕರ್ನಾಟಕದ ಪರಿಸರ ರಾಯಬಾರಿ ಪದವಿನ್ನು ನೀಡಿ, ಅವರು ಇಷ್ಟ ಬಂದ ಕಡೆ ಹೋಗಿ ಪ್ರಚಾರ ಮಾಡಲು ರಾಜ್ಯ ಖಾತೆ ಸಚಿವರ ಸ್ಥಾನವನ್ನು ನೀಡಿ, ವಾಹನ, ವೇತನ ಸೌಲಭ್ಯ ನೀಡಲಾಗುವುದು. ಹೊರ ರಾಜ್ಯಗಳಿಗೆ ಭೇಟಿ ಮಾಡಿದರೆ ಅವರ ಪ್ರಯಾಣ ವೆಚ್ ಭರಿಸಲಾಗುವುದು. ಅವರ ಬಗ್ಗೆ ವೆಬ್ ತಾಣ ಮಾಡಿ ಇಡೀ ಭಾರತದಾದ್ಯಂತ ಪ್ರಚುರ ಪಡಿಸಲಾಗುವುದು. ಅವರ ಬಗ್ಗೆ ಪ್ರತ್ಯೇಕ ವೆಬ್ ಸೀರೀಸ್ ರಚಿಸಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದ್ದಾರೆ.

ವಸತಿ ಸಚಿವ ವಿ. ಸೋಮಣ್ಣ, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!