ವಾರಾಣಸಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಭಾರಿ ಅವಘಡದಿಂದ ಪಾರಾಗಿದ್ದಾರೆ. ಯೋಗಿ ಆದಿತ್ಯನಾಥ್ (Yogi Adityanath) ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್, ಭಾನುವಾರ ಬೆಳಿಗ್ಗೆ ಟೇಕ್ ಆಫ್ ಆದ ಕೂಡಲೇ ಹಕ್ಕಿಯೊಂದು ಹೆಲಿಕಾಪ್ಟರ್‌ಗೆ ಅಪ್ಪಳಿಸಿದೆ. ಕೂಡಲೇ ಹೆಲಿಕಾಪ್ಟರ್ ಅನ್ನು ವಾರಾಣಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.

ಎರಡು ದಿನ ವಾರಾಣಸಿ ಪ್ರವಾಸದಲ್ಲಿದ್ದ ಯೋಗಿ ಆದಿತ್ಯನಾಥ್ ಅವರು, ಬಳಿಕ ವಿಮಾನದಲ್ಲಿ ರಾಜಧಾನಿ ಲಖನೌಗೆ ಮರಳಿದ್ದಾರೆ. ವಾರಾಣಸಿಯಿಂದ ಲಖನೌಗೆ ಹೊರಟಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ಹಕ್ಕಿಯೊಂದು ಕಿಟಕಿಗೆ ಡಿಕ್ಕಿ ಹೊಡೆದಿದೆ. ಪೈಲಟ್ ಕೂಡಲೇ ಅದರ ತುರ್ತು ಭೂಸ್ಪರ್ಶಕ್ಕೆ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಯೋಗಿ ಆದಿತ್ಯನಾಥ್ ಅವರ ಜತೆ ಅವರ ಸಿಬ್ಬಂದಿ ಕೂಡ ಇದ್ದರು ಎಂದು ವರದಿಯಾಗಿದೆ.

ಯಾವುದೇ ಗಾಯ ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. “ಮುಖ್ಯಮಂತ್ರಿ ಅವರ ಹೆಲಿಕಾಪ್ಟರ್ ಇಲ್ಲಿಂದ (ವಾರಾಣಸಿ) ಲಖನೌಗೆ ಹೊರಡಲು ಟೇಕ್ ಆಫ್ ಆದಾಗ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಬಳಿಕ ಅದು ಇಲ್ಲಿ ಲ್ಯಾಂಡ್ ಆಗಿದೆ” ಎಂದು ವಾರಾಣಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್‌ರಾಜ್ ಶರ್ಮಾ ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್ ಅವರು ಶನಿವಾರ ವಾರಾಣಸಿಗೆ ಆಗಮಿಸಿದ್ದರು. ನಗರದಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಪರಾಮರ್ಶನಾ ಸಭೆ ನಡೆಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!