ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶ್ರೀರಾಮ ಮಂದಿರದ ಗರ್ಭಗುಡಿ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಕೆತ್ತಿರುವ ಮೊದಲ ಇಟ್ಟಿಗೆಯನ್ನು ಗರ್ಭಗೃಹದಲ್ಲಿಟ್ಟು ಸಿಮೆಂಟ್ ಅನ್ನು ಹಾಕುವ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗರ್ಭಗುಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿರುವುದಾಗಿ ವರದಿ ತಿಳಿಸಿದೆ.

ಗರ್ಭಗುಡಿ ಶಿಲಾನ್ಯಾಸ ಸಮಾರಂಭದಲ್ಲಿ ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, 90 ಮಠಗಳ ಮಹಾಂತರು, ಸಾಧುಗಳು ಹಾಗೂ ರಾಮಮಂದಿರದ ಟ್ರಸ್ಟಿಗಳು ಹಾಜರಿದ್ದರು. ಅಯೋಧ್ಯಗೆ ಆಗಮಿಸಿರುವ ಸಿಎಂ ಯೋಗಿ ಅವರು ಗರ್ಭಗೃಹದ ಶಿಲಾನ್ಯಾಸ ನೆರವೇರಿಸಿದ ಬಳಿಕ ದ್ರಾವಿಡ ಶೈಲಿಯ ಶ್ರೀರಾಮ್ ಲಾಲಾ ಸದನ್ ದೇವಾಲಯವನ್ನು ಉದ್ಘಾಟಿಸಿರುವುದಾಗಿ ವರದಿ ವಿವರಿಸಿದೆ. ರಾಮಮಂದಿರ ಗರ್ಭಗೃಹ ನಿರ್ಮಾಣದ ಹಿನ್ನೆಲೆಯಲ್ಲಿ ರಾಮನಾಮ, ದುರ್ಗಾ ಸಪ್ತಶತಿ, ರುದ್ರಾಭಿಷೇಕ, ರಾಮರಕ್ಷಾ ಸ್ತೋತ್ರ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ, ಸುಂದರಕಾಂಡ ಪಾರಾಯಣ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಮಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ಗರ್ಭಗುಡಿಯ ನಿರ್ಮಾಣ ಕಾರ್ಯ 2023ರ ಡಿಸೆಂಬರ್ ನೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದೆ.

ಗರ್ಭಗೃಹ ನಿರ್ಮಾಣಕ್ಕೆ ರಾಜಸ್ಥಾನದ ಮಕ್ರನಾ ಪರ್ವತದ ಅಮೃತಶಿಲೆಯನ್ನು ಬಳಸಿಕೊಳ್ಳಲಾಗುತ್ತದೆ. ಒಟ್ಟು 13,300 ಕ್ಯೂಬಿಕ್‌ ಅಡಿಗಳಷ್ಟು ಶಿಲೆಗಳು ಇಲ್ಲಿ ಬಳಕೆಯಾಗಲಿವೆ. ಇವನ್ನೆಲ್ಲ ಸುಂದರ ಕೆತ್ತನೆಗಳಿಂದ ಅಲಂಕರಿಸಲಾಗಿದೆ. ಇಡೀ ಶ್ರೀರಾಮ ದೇಗುಲ ನಿರ್ಮಾಣಕ್ಕೆ 8ರಿಂದ 9 ಲಕ್ಷ ಕ್ಯೂಬಿಕ್‌ ಅಡಿಗಳಷ್ಟು ಮರಳಗಲ್ಲು, 6.37 ಲಕ್ಷ ಗ್ರಾನೈಟ್‌, 4.70 ಲಕ್ಷ ಕ್ಯೂಬಿಕ್‌ ಅಡಿಗಳಷ್ಟು ಗುಲಾಬಿ ಮರಳಗಲ್ಲನ್ನು ಬಳಸಿಕೊಳ್ಳಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!