ನೇಪಾಳ ತಾರಾ ಏರ್ ವಿಮಾನ ಪತನದಿಂದಾಗಿ ನಾಲ್ವರು ಭಾರತೀಯರು ಸೇರಿದಂತೆ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಭಾನುವಾರ ಪತನಗೊಂಡ ತಾರಾ ವಿಮಾನದಲ್ಲಿದ್ದ ನಾಲ್ವರು ಭಾರತೀಯರು ಸೇರಿದಂತೆ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಸೋಮವಾರ ಬಿಡುಗಡೆ ಮಾಡಿದ ಪ್ರಯಾಣಿಕರ ಪಟ್ಟಿಯಲ್ಲಿ ಏರ್‌ಲೈನ್ಸ್ ತಿಳಿಸಿದೆ. ವಿಮಾನದಲ್ಲಿ 13 ನೇಪಾಳಿಗಳು, ನಾಲ್ವರು ಭಾರತೀಯರು ಮತ್ತು ಇಬ್ಬರು ಜರ್ಮನ್ನರು ಇದ್ದರು ಎನ್ನಲಾಗಿದೆ.

ಕೆನಡಾ ನಿರ್ಮಿತ ವಿಮಾನವು ಪೋಖರಾ ನಗರದಿಂದ ಮಧ್ಯ ನೇಪಾಳದ ಜನಪ್ರಿಯ ಪ್ರವಾಸಿ ಪಟ್ಟಣವಾದ ಜೋಮ್ಸೋಮ್‌ಗೆ ಹಾರುತ್ತಿತ್ತು. ಕಠ್ಮಂಡುವಿನಿಂದ ಸುಮಾರು 200 ಕಿಲೋಮೀಟರ್ ಪೂರ್ವಕ್ಕೆ ಪೋಖರಾದಿಂದ ಬೆಳಿಗ್ಗೆ 10:15 ಕ್ಕೆ ಟೇಕಾಫ್ ಆದ ತಾರಾ ಏರ್‌ಗೆ ಸೇರಿದ ವಿಮಾನ ಪತನಗೊಳ್ಳುವ ಮುನ್ನದ ಸ್ಥಿತಿ ಹೇಗಿತ್ತು ಎನ್ನುವ ಬಗ್ಗೆ ಇಲ್ಲಿಯವರೆಗೆ ತಿಳಿದಿಲ್ಲ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ಹೇಳಿಕೆಯಲ್ಲಿ ತಿಳಿಸಿದೆ.

ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ವೈಭವಿ ಬಾಂದೇರ್ಕರ್, ಅಶೋಕ್ ಕುಮಾರ್ ತ್ರಿಪಾಠಿ, ಧನುಷ್ ತ್ರಿಪಾಠಿ ಮತ್ತು ರಿತಿಕಾ ತ್ರಿಪಾಠಿ ಎಂದು ಗುರುತಿಸಲಾಗಿರುವ ಭಾರತೀಯ ಪ್ರಜೆಗಳು ಪುಣೆಯವರು ಎನ್ನಲಾಗಿದೆ. ಕಠ್ಮಂಡುವಿನಲ್ಲಿನ ಭಾರತೀಯ ರಾಯಭಾರ ಕಚೇರಿ ಈಗಾಗಲೇ ಅಗಲಿದ ಭಾರತೀಯ ಪ್ರಜೆಗಳ ಕುಟುಂಬ ಸದಸ್ಯರೊಂದಿಗೆ ಸಂಪರ್ಕವನ್ನು ಸ್ಥಾಪಿಸಿದೆ. ವಿಮಾನ ಅಪಘಾತದ ನಂತರ, ನೇಪಾಳದ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಚಿವಾಲಯವು ದುರಂತದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಸೋಮವಾರ ಐದು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಮೃತ ದೇಹಗಳನ್ನು ಕಠ್ಮಂಡುವಿಗೆ ತಂದ ನಂತರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ನೇಪಾಳದ ಗೃಹ ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!