ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿವಿ ಘಟಕ ಕಾಲೇಜಿನಲ್ಲಿ 14 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಮೇ 26ಕ್ಕೆ ಹಿಜಾಬ್ ವಿರೋಧಿಸಿ ಕಾಲೇಜು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಹಿಜಾಬ್​ಗೆ ಅವಕಾಶವಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಆದೇಶ ನೀಡಿದೆ. ಜೊತೆಗೆ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲೆ ತಿಳಿ ಹೇಳಿದ್ದರು. ಹೀಗಿದ್ದರೂ ಆ 14 ವಿದ್ಯಾರ್ಥಿನಿಯರು ಇಂದೂ ಕೂಡಾ ಮತ್ತೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದಾರೆ.

ಶನಿವಾರ ಕೂಡಾ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಈ ವೇಳೆ ಪ್ರಾಂಶುಪಾಲೆ ಡಾ.ಅನುಸೂಯ ರೈ ತರಗತಿಗೆ ಹೋಗದಂತೆ ತಡೆದಿದ್ದರು. ಬಳಿಕ ವಿದ್ಯಾರ್ಥಿನಿಯರು ಕಾಲೇಜು ಗ್ರಂಥಾಲಯದತ್ತ ತೆರಳಿದ್ದರು. ಅಲ್ಲೂ ವಿದ್ಯಾರ್ಥಿನಿಯರನ್ನು ತಡೆದು ಪ್ರಾಂಶುಪಾಲೆ ಬುದ್ಧಿ ಹೇಳಿದ್ದರು. ಆದರೆ ಹಿಜಾಬ್​ಗೆ ಪಟ್ಟು ಬಿದ್ದಿರುವ ವಿದ್ಯಾರ್ಥಿನಿಯರು ತರಗತಿಗೆ ಹೋಗದೆ ಕ್ಯಾಂಪಸ್​ನಲ್ಲಿ ಕುಳಿತು ನಂತರ ತೆರಳಿದ್ದರು ಎನ್ನಲಾಗಿದೆ.  ಬಳಿಕ ದ.ಕ ಜಿಲ್ಲಾಧಿಕಾರಿ ಕಚೇರಿಗೆ ವಿದ್ಯಾರ್ಥಿನಿಯರು ಆಗಮಿಸಿದ್ದಾರೆ. ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಿಸಿ ಡಾ.ಕೆ.ವಿ.ರಾಜೇಂದ್ರರವರ ಜೊತೆ ಮಾತುಕತೆ ನಡೆಸಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರರವರು ನಾನು ವಿದ್ಯಾರ್ಥಿಗಳ ಜೊತೆ ಮಾತನಾಡಿದ್ದೇನೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ನಿರ್ಧಾರದ ಬಗ್ಗೆ ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಆದರೆ ಸಿಂಡಿಕೇಟ್ ನಿರ್ಧಾರವನ್ನು ಜಿಲ್ಲಾಡಳಿತ ಪ್ರಶ್ನಿಸಲು ಆಗುವುದಿಲ್ಲ ಎಂದಿದ್ದೇನೆ‌ ಮತ್ತು ಕಾಲೇಜಿನಲ್ಲಿ ಶಾಂತಿ ಭಂಗ ಮಾಡುವಂತೆ ಇಲ್ಲ ನೀವು ನ್ಯಾಯಾಲಯದ ಮುಖಾಂತರವೇ ಇದನ್ನು ಬಗೆಹರಿಸಬೇಕಾಗಿದೆ ಎಂದು ತಿಳಿಸಿದ್ದೇನೆ ಎಂದರು.

Leave a Reply

Your email address will not be published. Required fields are marked *

error: Content is protected !!