ಶ್ರೀನಗರ: ಸೈನಿಕರನ್ನು ಕರೆದೊಯ್ಯುತ್ತಿದ್ದ ವಾಹನ ನದಿಯ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಏಳು ಮಂದಿ ಯೋಧರು ಜೀವ ಕಳೆದುಕೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಲಡಾಖ್‌ನ ತುರ್ತುಕ್ ವಲಯದ ಶ್ಯೋಕ್ ನದಿ ಸಮೀಪದ ಬಳಿ ಶುಕ್ರವಾರ ರಸ್ತೆಯಿಂದ ಜಾರಿದ ವಾಹನ, ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಪರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‌ನ 26 ಯೋಧರ ತುಕಡಿಯು ಸಬ್ ಸೆಕ್ಟರ್ ಹನೀಫ್‌ನಲ್ಲಿನ ಮುಂಚೂಣಿ ನೆಲೆಯತ್ತ ತೆರಳುತ್ತಿತ್ತು. ಬೆಳಿಗ್ಗೆ ಅಂದಾಜು 9 ಗಂಟೆ ಸುಮಾರಿಗೆ, ಥೋಯಿಸ್‌ನಿಂದ ಸುಮಾರು 25 ಕಿಮೀ ದೂರದಲ್ಲಿ ವಾಹನವು ರಸ್ತೆಯಿಂದ ಜಾರಿದೆ. ಬಳಿಕ ಸುಮಾರು 50- 60 ಅಡಿ ಆಳದ ಶ್ಯೋಕ್ ನದಿಗೆ ಉರುಳಿದೆ” ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಭೀಕರ ದುರ್ಘಟನೆಯಲ್ಲಿ ವಾಹನದಲ್ಲಿದ್ದ ಎಲ್ಲ ಸೈನಿಕರಿಗೂ ಗಾಯಗಳಾಗಿವೆ. ಆದರೆ ಏಳು ಮಂದಿ ದುರ್ದೈವಿ ಯೋಧರು ಬಲಿಯಾಗಿದ್ದಾರೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಎಲ್ಲ ಸೈನಿಕರನ್ನೂ ನದಿಯಿಂದ ಎತ್ತಿ, ಪರ್ತಾರ್ಪುರ ಫೀಲ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಲೇಹ್‌ನಿಂದ ಸೇನಾ ಆಸ್ಪತ್ರೆ ಮತ್ತು ಸರ್ಜಿಕಲ್ ತಂಡಗಳನ್ನು ಪರ್ತಾರ್ಪುರಕ್ಕೆ ಕರೆತರಲಾಗಿದೆ.

“ಇದುವರೆಗೂ ಏಳು ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಇತರರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಹೆಚ್ಚು ಗಂಭೀರ ಸ್ಥಿತಿಯಲ್ಲಿರುವ ಯೋಧರನ್ನು ವೆಸ್ಟರ್ನ್ ಕಮಾಂಡ್‌ಗೆ ಸಾಗಿಸಲು ವಾಯು ಪಡೆಯಿಂದ ವೈಮಾನಿಕ ಸಹಾಯ ಪಡೆಯಲು ಕೂಡ ಸಿದ್ಧತೆ ನಡೆಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!