ಕಾಸರಗೋಡು : ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್‌ ಶಾರೀಕ್‌ ಕೊಚ್ಚಿಯಲ್ಲಿ ಈ ಹಿಂದೆ ಎಂಟು ವಸತಿ ಗೃಹಗಳಲ್ಲಿ ತಂಗಿದ್ದನೆಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗೆ ಮಾಹಿತಿ ಲಭಿಸಿದೆ. ಎಲ್ಲ 8 ಕೇಂದ್ರಗಳಿಗೆ ತನಿಖಾ ತಂಡ ತೆರಳಿ ಮಾಹಿತಿ ಸಂಗ್ರಹಿಸಿದೆ.

ಆಲುವಾ ರೈಲು ನಿಲ್ದಾಣ, ಎರ್ನಾಕುಳಂ, ನಾರ್ತ್‌ ರೈಲ್ವೇ ಸ್ಟೇಶನ್‌ಗಳ ಪರಿಸರದ ವಸತಿ ಗೃಹಗಳಲ್ಲಿ ತಂಗಿದ್ದನು. ಅದರ ಸಿಸಿ ಕೆಮಾರ ದೃಶ್ಯಗಳನ್ನು ತನಿಖಾ ತಂಡ ಸಂಗ್ರಹಿಸಿದೆ. ಆತ
ತಂಗಿದ್ದ ವಸತಿ ಗೃಹಗಳ ವಿಳಾಸದಲ್ಲಿ ಆತನಿಗೆ ಹಲವು ವಸ್ತುಗಳು ಪಾರ್ಸೆಲ್‌ ಗಳು ನಿರಂತರವಾಗಿ ಬಂದಿದ್ದುವು. ಅವುಗಳನ್ನು ಎಲ್ಲಿಂದ ಕಳುಹಿಸಿಕೊಡಲಾಗಿದೆ ಎಂದು ಪತ್ತೆಹಚ್ಚಲು ತನಿಖಾ ತಂಡ ಮುಂದಾಗಿದೆ.

ಕೊಚ್ಚಿಯ ಪೋರ್ಟ್‌ ಕೊಚ್ಚಿ ಮುನಬಂನಲ್ಲಿ ತಂಗಿದ್ದ ಶಾರೀಕ್‌ ಅಲ್ಲಿ ಹಲವರನ್ನು ಭೇಟಿಯಾಗಿ ಮಾತನಾಡಿದ್ದ. ಆ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಲಾಗುತ್ತಿದೆ. ಪ್ರತೀ ವಸತಿ ಗೃಹದಲ್ಲಿ ಆತ ಎರಡರಿಂದ ನಾಲ್ಕು ದಿನಗಳ ತನಕ ತಂಗಿದ್ದ. ಆಲುವಾದ ವಸತಿ ಗೃಹವೊಂದರಲ್ಲಿ ಕೊಠಡಿ ಪಡೆದು ಕೆಲವು ದಿನಗಳ ಬಳಿಕ ತೆರವುಗೊಳಿಸಿದ್ದ. ಆ ಬಳಿಕ ಆತನ ಹೆಸರಿಗೆ ಪಾರ್ಸೆಲ್‌ ಬಂದಿತ್ತು. ಆ ಬಗ್ಗೆ ವಸತಿ ಗೃಹದವರು ಫೋನ್‌ ಮೂಲಕ ತಿಳಿಸಿದ್ದು, ಆತ ಮರಳಿ ಬಂದು ಅದನ್ನು ಕೊಂಡೊಯ್ದಿದ್ದ. ಉಗ್ರಗಾಮಿ ಚಟುವಟಿಕೆಗಳಿಗಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ ಪದೇ ಪದೆ ಕೇರಳಕ್ಕೆ ಬಂದಿದ್ದನೆಂದು ತಿಳಿಯಲಾಗಿದೆ.

By admin

Leave a Reply

Your email address will not be published. Required fields are marked *

error: Content is protected !!