ಮಂಗಳೂರು : ಕರಾವಳಿಯಲ್ಲಿ ಒಂದು ವಾರದಿಂದ ಧಾರಕಾರವಾಗಿ ಮಳೆ ಸುರಿಯುತ್ತಿದ್ದು, ಸದ್ಯ ಸ್ವಲ್ಪ ಮಟ್ಟಿಗೆ ಮಳೆಯ ಪ್ರಮಾಣ ಕಡಿಮೆಯಾಗಿದೆ ಆದರೆ ಇದೀಗ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಪ್ರಮಾಣ ಏರಿಕೆಯಾಗುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 207 ಸಕ್ರಿಯ ಡೆಂಗ್ಯೂ ಪ್ರಕರಣಗಳಿದ್ದು ಎರಡೂವರೆ ಸಾವಿರಕ್ಕೂ ಅಧಿಕ ಶಂಕಿತ ಜ್ವರ ಪ್ರಕರಣಗಳು ದಾಖಲಾಗಿವೆ.

ಮಳೆಯೊಂದಿಗೆ ಡೆಂಗ್ಯೂ ಭೀತಿಯೂ ಹೆಚ್ಚಾಗಿದ್ದು, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹಲವೆಡೆ ಡೆಂಗ್ಯೂ ಆತಂಕಕಾರಿಯಾಗಿ ಪರಿಣಮಿಸಿದೆ. ಡೆಂಗ್ಯೂ ಮಿತಿ ಮೀರಿದ ಹಿನ್ನೆಲೆಯಲ್ಲಿ ಶಾಲೆಗಳಿಗೆ 10 ದಿನ ರಜೆ ಘೋಷಣೆ ಮಾಡಲಾಗಿದೆ. ಬೈಂದೂರು ತಾಲೂಕು ವ್ಯಾಪ್ತಿಯ ಜಡ್ಕಲ್ ಮುದೂರು ಗ್ರಾಮದಲ್ಲಿ ಶಾಲೆಗಳಿಗೆ ಈಗಾಗಲೇ 10 ದಿನಗಳ‌ ಕಾಲ ಶಾಲೆಗಳಿಗೆ ರಜೆಯನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಘೋಷಿಸಿದ್ದಾರೆ.

ಉಭಯ ಜಿಲ್ಲಾ ಆರೋಗ್ಯ ಇಲಾಖೆ ಪ್ರತಿ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೆಗೆ ಮುಂದಾಗಿದೆ. ಮೇ 15ರ ವರೆಗಿನ ಅಂಕಿ-ಅಂಶಗಳ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 152 ಖಚಿತ ಪ್ರಕರಣಗಳಿದ್ದು, 2,000 ಕ್ಕೂ ಮಿಕ್ಕಿ ಶಂಕಿತ ಪ್ರಕರಣಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 55 ಖಚಿತ ಪ್ರಕರಣಗಳು ದಾಖಲಾಗಿದೆ. ಮಂಗಳೂರು ಗ್ರಾಮಾಂತರ-11, ಮಂಗಳೂರು ಪಟ್ಟಣ-23, ಬಂಟ್ವಾಳ-4, ಪುತ್ತೂರು-2, ಸುಳ್ಯ-5, ಬೆಳ್ತಂಗಡಿ-10 ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯಲ್ಲೂ 152 ಖಚಿತ ಪ್ರಕರಣಗಳು ದಾಖಲಾಗಿದೆ. ಮುದೂರು 105, ಕೊಲ್ಲೂರು 2, ಜಡ್ಕಲ್ 6 ಸೇರಿದಂತೆ ಉಡುಪಿಯ ಇತರೆಡೆ 39 ಪ್ರಕರಣಗಳು ದಾಖಲಾಗಿದೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಒಂದು ಚಮಚದಷ್ಟು ಶುದ್ಧ ನೀರು ಕೂಡ ವಾರಗಳ ಕಾಲ ಕಲಕದೆ ಇದ್ದಲ್ಲಿ ಸೊಳ್ಳೆಗಳ ಉತ್ಪತ್ತಿಯ ತಾಣವಾಗಬಹುದು.

ಸದ್ಯ ಸಾರ್ವಜನಿಕರು ಡೆಂಗ್ಯೂ ಭೀತಿಯ ಬಗ್ಗೆ ಜಾಗರೂಕರಾಗಿರಬೇಕು ಮನೆಯ ಸುತ್ತ ನೀರು ನಿಲ್ಲದಂತೆ ಲಾರ್ವ ಉತ್ಪತ್ತಿಯಾಗದಂತೆ ಗಮನಹರಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!